ಹೊಸ ದಿಗಂತ ಆನ್ಲೈನ್ ಡೆಸ್ಕ್:
ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಜಿಲ್ಲಾಡಳಿತ ಇಂದಿನಿಂದ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಜಿಲ್ಲಾಧಿಕಾರಿ ನೇತೃತ್ವದದಲ್ಲಿ ಮಹತ್ವದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ನಿರ್ಧರಿಸಲಾಗಿದೆ.
ಮುಖ್ಯವಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಬೇಕಲ ಕೋಟೆ ಹಾಗೂ ಪಳ್ಳಿಕೆರೆ ಬೀಚ್ನಲ್ಲಿ ಇಂದಿನಿಂದ ಗರಿಷ್ಟ ಒಂದು ಸಾವಿರ ಮಂದಿಗೆ ಮಾತ್ರ ಭೇಟಿ ನೀಡಲು ಅವಕಾಶ ನೀಡಲಾಗುತ್ತಿದೆ. ಇಲ್ಲಿನ ಮುಖ್ಯ ದ್ವಾರ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಬ್ಯಾರಿಕೇಡ್ ಸ್ಥಾಪಿಸಿ ಪ್ರವೇಶ ನಿರ್ಬಂಽಸಲಾಗುತ್ತದೆ. ಚೆಂಬರಿಕ ಬೀಚ್, ವಲಿಯಪರಂಬ ಬೀಚ್ನಲ್ಲಿ ಕೂಡಾ ಪ್ರವಾಸಿಗರ ಭೇಟಿಗೆ ಕೆಲವೊಂದು ನಿಯಮಾವಳಿ ರೂಪಿಸಲಾಗಿದೆ. ಇವುಗಳನ್ನು ನಿರ್ವಹಿಸಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪಂಚಾಯತ್ ಆಡಳಿತಗಳಿಗೆ ಹೊಣೆ ವಹಿಸಲಾಗಿದೆ. ಇದಲ್ಲದೆ ಪ್ರವಾಸಿ ಕೇಂದ್ರಗಳ ಬಳಿ ಅಂಟಿಜೆನ್ ಟೆಸ್ಟ್ ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ನಿಷೇಧಾಜ್ಞೆ ಹಿಂತೆಗೆದುಕೊಂಡಿರುವುದು, ಅಂತಾರಾಜ್ಯ ಬಸ್ಸು ಸಂಚಾರ ಆರಂಭಗೊಂಡಿರುವುದು, ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಮೊದಲಾದ ಕಾರಣಗಳಿಂದ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ. ರಾಮದಾಸ್, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ಬೇಕಲ, ಎಸ್.ಐ. ಅಜಿತ್ ಕುಮಾರ್, ಮೇಲ್ಪರಂಬ ಎಸ್.ಎಚ್.ಒ. ಬೆನ್ನಿ ಲಾಲು, ಪಂಚಾಯತ್ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.