ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಇದೇ ವೇಳೆ 6 ಮಂದಿ ರೋಗ ಮುಕ್ತರಾಗಿದ್ದಾರೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಸೋಂಕು ಬಾಧಿತರ ಸಂಖ್ಯೆ 167. ಈ ಪೈಕಿ 79 ಮಂದಿ ರೋಗ ಮುಕ್ತರಾಗಿದ್ದಾರೆ. 88 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದಲ್ಲಿ ಮಂಗಳವಾರ ಹೊಸದಾಗಿ 8 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ ನಾಲ್ವರಿಗೆ, ಕಲ್ಲಿಕೋಟೆ ಜಿಲ್ಲೆಯಲ್ಲಿ ಮೂವರಿಗೆ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಬಾಧಿಸಿದೆ. ರೋಗ ಬಾಧಿತರಲ್ಲಿ ಐವರು ದುಬೈಯಿಂದ ಬಂದವರು. ಉಳಿದ ಮೂವರು ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ. ಕಣ್ಣೂರು ಜಿಲ್ಲೆಯ ಮೂವರು, ಕಲ್ಲಿಕೋಟೆ ಮತ್ತು ಕಾಸರಗೋಡಿನ ತಲಾ ಒಬ್ಬರು ದುಬೈಯಿಂದ ಬಂದವರು. ಕಲ್ಲಿಕೋಟೆ ಜಿಲ್ಲೆಯ ಇಬ್ಬರಿಗೆ ಮತ್ತು ಕಣ್ಣೂರು ಜಿಲ್ಲೆಯ ಒಬ್ಬರು ಸಂಪರ್ಕದಿಂದ ರೋಗ ಬಾಧಿತರಾಗಿದ್ದಾರೆ. ಇದೇ ವೇಳೆ ಕೇರಳದಲ್ಲಿ ಮಂಗಳವಾರ 13 ಮಂದಿ ರೋಗ ಮುಕ್ತರಾಗಿದ್ದಾರೆ. ಕಾಸರಗೋಡು ಜಿಲ್ಲೆಯ 6 ಮಂದಿ(ಕಣ್ಣೂರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇಬ್ಬರು), ಎರ್ನಾಕುಳಂ, ಪಾಲ್ಘಾಟ್ ಜಿಲ್ಲೆಯ ತಲಾ ಇಬ್ಬರು, ಕೊಲ್ಲಂ, ತೃಶ್ಶೂರು, ಮಲಪ್ಪುರ ಜಿಲ್ಲೆಯ ತಲಾ ಒಬ್ಬರು ರೋಗ ಮುಕ್ತರಾಗಿದ್ದಾರೆ. ಪ್ರಸ್ತುತ ಕೇರಳ ರಾಜ್ಯದಲ್ಲಿ 173 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ವರೆಗೆ ರಾಜ್ಯದಲ್ಲಿ 211 ಮಂದಿ ರೋಗಮುಕ್ತರಾಗಿದ್ದಾರೆ. ಮಾ.21 ರಂದು ದುಬೈಯಿಂದ ಕಾಸರಗೋಡಿಗೆ ಬಂದಿದ್ದ 47 ರ ಹರೆಯದ ಚೆಂಗಳದ ವ್ಯಕ್ತಿಗೆ 23 ದಿನಗಳ ಬಳಿಕ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 1,07,075 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 1,06,511 ಮಂದಿ ಮನೆಗಳಲ್ಲೂ, 564 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಮಂಗಳವಾರ 81 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರೋಗ ಲಕ್ಷಣಗಳುಳ್ಳ 16,235 ವ್ಯಕ್ತಿಗಳ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 15,488 ಸ್ಯಾಂಪಲ್ಗಳ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ.