ಕಾಸರಗೋಡು: ಭಾನುವಾರವಷ್ಟೇ ಶೇಕಡಾ ನೂರರಷ್ಟು ಕೊರೋನಾ ಮುಕ್ತವಾಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ನಾಲ್ಕು ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇವರೆಲ್ಲರೂ ಮುಂಬೈಯಿಂದ ಬಂದವರಾಗಿದ್ದಾರೆ. ಇದು ಜಿಲ್ಲೆಯ ಜನರನ್ನು ಮತ್ತೆ ಆತಂಕಕ್ಕೆ ಒಳಪಡಿಸಿದೆ. ಜಿಲ್ಲೆಯಲ್ಲಿ ಕೆಲವೊಂದು ವ್ಯಕ್ತಿಗಳು ಈಗಲೂ ನಿಗಾದಲ್ಲಿದ್ದು ನೂರಕ್ಕೆ ನೂರರಷ್ಟು ಕೊರೋನಾ ಮುಕ್ತಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದೆಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಮಧ್ಯೆ ಇತರ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಇನ್ನೂ ಕೆಲವರಲ್ಲಿ ಕೊರೋನಾದ ಛಾಯೆ ಕಂಡುಬಂದಿರುವುದಾಗಿ ಹೇಳಲಾಗುತ್ತಿದೆ. ಸೋಮವಾರ ಕೇರಳದಲ್ಲಿ ಒಟ್ಟು ಏಳು ಕೊರೋನಾ ಕೇಸುಗಳು ಪತ್ತೆ ಆಗಿದ್ದು ಕಾಸರಗೋಡಿನಲ್ಲಿ 4, ಪಾಲಕ್ಕಾಡಿನಲ್ಲಿ 1, ಮಲಪ್ಪುರಂ ನಲ್ಲಿ 1 ಮತ್ತು ವಯನಾಡು ಜಿಲ್ಲೆಯಲ್ಲಿ 1 ಕೊರೋನಾ ಪ್ರಕರಣ ಪತ್ತೆಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕಂಡುಬಂದಿರುವ 4 ಪಾಸಿಟಿವ್ ಕೇಸ್ ಗಳು ಮುಂಬೈಯಿಂದ ಬಂದವರಾಗಿದ್ದು , ಹೊರ ರಾಜ್ಯ ಮತ್ತು ವಿದೇಶಗಳಿಂದ ಆಗಮಿಸುವ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಇನ್ನಷ್ಟು ಸಮಸ್ಯೆ ಆಗಬಹುದು ಎಂದು ಅಂದಾಜಿಸಲಾಗಿದೆ.