ಕಾಸರಗೋಡು: ಜಿಲ್ಲೆಯ ವ್ಯಾಪಾರಿ ಪ್ರತಿನಿಧಿಗಳೊಂದಿಗೆ ಕೇರಳ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಅವರು ಆಗಸ್ಟ್ 3ರಂದು ಬೆಳಗ್ಗೆ 10 ರಿಂದ 11.30ರ ವರೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಕೋವಿಡ್ ಪ್ರತಿರೋಧ ಕ್ರಮಗಳ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾದ ಕಟ್ಟುನಿಟ್ಟಿನ ನಿಯಂತ್ರಣದಿಂದ ಜಿಲ್ಲೆಯ ವ್ಯಾಪಾರಿಗಳು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಚಿವರ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ.
ಅಂತಾರಾಜ್ಯ ಸರಕು ಸಾಗಣೆಗೆ ಸಂಬಂಧಿಸಿ ಮಂಗಳೂರಿನಿಂದ ಕಾಸರಗೋಡಿಗೂ, ಕಾಸರಗೋಡಿನಿಂದ ಮಂಗಳೂರಿಗೂ ದಿನನಿತ್ಯ ಪ್ರಯಾಣಿಸುವ ವ್ಯಾಪಾರಿಗಳ ಸಮಸ್ಯೆಗಳು ಸಹಿತ ವಿವಿಧ ವಿಚಾರಗಳಲ್ಲಿ ಮಾತುಕತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇದೇ ವೇಳೆ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಕಾಸರಗೋಡು ಜಿಲ್ಲೆಯ ಜಿಲ್ಲಾ ಪಂಚಾಯತ್, ಬ್ಲಾಕ್ ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರಸಭೆಗಳ ಪ್ರತಿನಿಧಿಗಳು ಹಾಗೂ ಇತರ ಜನಪ್ರತಿನಿಧಿಗಳೊಂದಿಗೆ ಆ.3ರಂದು ಅಪರಾಹ್ನ 2.30ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಕೊರೋನಾ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳ ಕುರಿತು ಇದೇ ಸಂದರ್ಭದಲ್ಲಿ ಸಮಗ್ರ ಮಾತುಕತೆ ನಡೆಯಲಿದೆ.