Thursday, July 7, 2022

Latest Posts

ಕಾಸರಗೋಡು|ವ್ಯಾಪಾರ ಸಂಸ್ಥೆಗಳಲ್ಲಿ ದುಡಿಯುವವರಿಗೆ ಮಾಸ್ಕ್ , ಗ್ಲೌಸ್ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು

ಕಾಸರಗೋಡು: ಜಿಲ್ಲೆಯ ಎಲ್ಲ ವ್ಯಾಪಾರ ಸಂಸ್ಥೆಗಳಲ್ಲಿ ದುಡಿಯುತ್ತಿರುವವರು ಮುಖಕ್ಕೆ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್ ಗಳನ್ನು ಕಡ್ಡಾಯವಾಗಿ ಧರಿಸುವಂತೆ ಜಿಲ್ಲಾಡಳಿತ ಆದೇಶಿಸಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಅಂತಹ ಅಂಗಡಿಗಳನ್ನು ಮುಚ್ಚುಗಡೆಗೊಳಿಸಿ ನಂತರ ರೋಗಾಣುಮುಕ್ತ ಚಟುವಟಿಕೆ ನಡೆಸಿದ ಬಳಿಕವಷ್ಟೇ ತೆರೆಯಲು ಅನುಮತಿ ನೀಡಲಾಗಿವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗ್ರಾಹಕರು ಗುಂಪುಗೂಡದಂತೆ ವ್ಯಾಪಾರ ಸಂಸ್ಥೆಗಳ ಮಾಲೀಕರು ಗಮನಹರಿಸುವಂತೆ ಸೂಚಿಸಲಾಗಿದೆ. ಭಾನುವಾರದ ವರದಿಯಂತೆ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರಲ್ಲಿ ಕೋವಿಡ್ ಬಾಧಿಸಿದ್ದು , ಬಹುತೇಕ ಸೋಂಕು ವ್ಯಾಪಾರ ಸಂಸ್ಥೆಗಳ ಮೂಲಕ ತಗುಲಿರುವುದರಿಂದ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅವರು ನುಡಿದರು.
ಇತರ ರಾಜ್ಯಗಳಿಂದ ಸರಕು ಹೇರಿಕೊಂಡು ಬರುವ ಲಾರಿಗಳ ಸಿಬ್ಬಂದಿಗಳಿಂದಲೂ ವೈರಸ್ ವ್ಯಾಪಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಇಂತಹ ಲಾರಿಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಬ್ರೇಕ್ ಹಾಕಲಾಗುವುದು ಎಂದರು.
ಕಳೆದ ದಿನಗಳಲ್ಲಿ ಕೋವಿಡ್ ಬಾಧಿಸಿದ 8 ಮಂದಿಯ ಸಂಪರ್ಕ ಮಾಹಿತಿ ಇನ್ನೂ ಲಭ್ಯವಾಗದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಲಾಕ್ ಡೌನ್ ಕಾಲಾವಧಿಯಲ್ಲಿ ಸಾರ್ವಜನಿಕರು ಕೈಗೊಂಡಿದ್ದ ಜಾಗ್ರತೆ ವ್ಯವಸ್ಥೆಯನ್ನು ಮುಂದೆಯೂ ಪಾಲಿಸಬೇಕು. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ತಿಳಿಸುವ ಎಲ್ಲ ನೀತಿ ನಿಬಂಧನೆಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss