Wednesday, August 17, 2022

Latest Posts

ಕಾಸರಗೋಡು| ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಲ್ಲಿದ್ದರೂ ಅವಗಣನೆಯಿಂದ ಕೊರೋನಾ ಹೆಚ್ಚಳ

ಕಾಸರಗೋಡು: ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಮಾನದಂಡಗಳನ್ನು ಪಾಲಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಕೂಡ ಹೆಚ್ಚುತ್ತಿದೆ. ಅಧಿಕಾರಿಗಳ ಮೌನ ಧೋರಣೆ, ರಾಜಕೀಯ ಪಕ್ಷಗಳ ಸ್ಪರ್ಧಾತ್ಮಕ ಮನೋಭಾವದಿಂದ ಸಮಸ್ಯೆ ತಲೆದೋರುತ್ತಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ , ಪ್ರಧಾನ ಮಾರುಕಟ್ಟೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಜನರ ಸಂದಣಿ ಹೆಚ್ಚು ಕಂಡುಬರುತ್ತಿದೆ. ಕೋವಿಡ್ ಮಾನದಂಡಗಳನ್ನು ಪಾಲಿಸಬೇಕೆಂದು ಎಲ್ಲ ಸಂಸ್ಥೆಗಳ ಮುಂಭಾಗ ಬರೆದು ಪ್ರದರ್ಶಿಸಲಾಗಿದ್ದರೂ ಅದನ್ನು ಯಾರೂ ಅಷ್ಟಾಗಿ ಗಮನಿಸುವುದಿಲ್ಲ ಎಂಬ ಆರೋಪವಿದೆ.
ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರವಂತೂ ಇದೀಗ ಒಂದು ಮಿನಿ ಮೀನು ಮಾರುಕಟ್ಟೆಯಾಗಿ ಬದಲಾಗಿದೆ. ಜಿಲ್ಲೆಯ ಪೇಟೆ ಪಟ್ಟಣಗಳಲ್ಲಿ ಯಾವುದೇ ಅಂತರ ಪಾಲಿಸದೆ ಜನರು ವ್ಯವಹರಿಸುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ವಿದ್ಯಾನಗರದ ವರೆಗಿನ ರಸ್ತೆಗಳಲ್ಲೆಲ್ಲ ಮೀನು ಮಾರಾಟವೂ, ಇತರ ಬೀದಿ ವ್ಯಾಪಾರವೂ ಪ್ರತಿನಿತ್ಯ ಸಕ್ರಿಯವಾಗಿದೆ.
ಕೊರೋನಾ ಸೋಂಕು ಹರಡುವ ಹೆಸರಲ್ಲಿ ಮೀನು ಮಾರುಕಟ್ಟೆ ಮುಚ್ಚಿರುವುದು, ಬಳಿಕ ತೆರೆಯಲು ಕ್ರಮ ಕೈಗೊಳ್ಳದಿರುವುದು ಮೀನು ಮಾರಾಟ ರಸ್ತೆ ಬದಿಗೆ ತಲುಪಲು ಕಾರಣವಾಗಿದೆ. ಮೀನು ಮಾರುಕಟ್ಟೆಯನ್ನು ಮುಚ್ಚಿದ ಬಳಿಕ ಅಧಿಕಾರಿಗಳೇ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಣ್ಣ ಪ್ರಮಾಣದಲ್ಲಿ ಮಾರಾಟಕ್ಕೆ ಅವಕಾಶ ನೀಡಿದ್ದರು. ಆದರೆ ಇಲ್ಲಿ ಯಾರೂ ಅಂತರ ಪಾಲಿಸುತ್ತಿಲ್ಲ. ಯಾವುದೇ ಮುಂಜಾಗ್ರತೆಯೂ ಇಲ್ಲ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಈ ಮೊದಲು ಕೇರಳ ರಾಜ್ಯ ಸಾರಿಗೆ ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲಿಸಲಾಗುತ್ತಿತ್ತು. ಆದರೆ ಈಗ ಅದೂ ಕೂಡ ಇಲ್ಲದಾಗಿದೆ. ತುಂಬಿ ತುಳುಕುವ ಜನರೊಂದಿಗೆ ಬಸ್ ಗಳು ಸಂಚರಿಸುತ್ತಿವೆ. ಇದೆಲ್ಲ ಜಿಲ್ಲೆಯಲ್ಲಿ ಕೊರೋನಾ ರೋಗ ವ್ಯಾಪಕವಾಗಿ ಹರಡಲು ಕಾರಣವಾದೀತೆಂದು ಆತಂಕಪಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!