ಕಾಸರಗೋಡು: ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಹಾಗೂ ಪುತ್ರ ದಾರುಣರಾಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರ್ಕಾಡಿ ವಿದ್ಯುತ್ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ವರ್ಕಾಡಿ ಸಮೀಪದ ಬೋಳಂತಕೋಡಿ ನಿವಾಸಿ, ಅಟೋ ಚಾಲಕ ವಿಶ್ವನಾಥ ಎಂಬವರ ಪತ್ನಿ ವಿಜಯಾ (30) ಹಾಗೂ ಪುತ್ರ ಆಶ್ರಯ್ (6) ಮೃತಪಟ್ಟ ನತದೃಷ್ಟರು. ಮನೆಯ ಸಮೀಪದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದ್ದ ಪುತ್ರನನ್ನು ರಕ್ಷಿಸಲು ಧಾವಿಸಿದ ತಾಯಿಗೂ ವಿದ್ಯುತ್ ಆಘಾತಗೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಂಜೇಶ್ವರ ಪೊಲೀಸರು ಘಟನಾ ಸ್ಥಳ ಸಂದರ್ಶಿಸಿ ಪ್ರಕರಣ ದಾಖಲಿಸಿದರು.
ಕಳೆದ ಕೆಲವು ದಿನಗಳ ಹಿಂದೆಯೇ ಇಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದಿದ್ದು , ಇಲಾಖೆಗೆ ಮಾಹಿತಿ ನೀಡಿದ್ದರೂ ದುರಸ್ತಿ
ಕಾರ್ಯ ನಡೆಸಿಲ್ಲ ಎಂದು ದೂರಲಾಗಿದೆ. ದಶಕಗಳ ಹಿಂದೆ ವೇದೋಡಿ ಪರಿಸರದಲ್ಲಿ ಕಡಿದುಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಅನೇಕ ಮಂದಿ ಮಕ್ಕಳು ಸ್ಥಳದಲ್ಲೇ ಮೃತಪಟ್ಟಂತಹ ಘಟನೆ ಮತ್ತೆ ಮರುಕಳಿಸಿದಂತಾಗಿದೆ.