ಕಾಸರಗೋಡು: ಕಲೆಕ್ಟರೇಟ್ ಬಳಿಯ ಮನೆಯೊಂದರಿಂದ ಬೃಹತ್ ಪ್ರಮಾಣದ ಶ್ರೀಗಂಧದ ಕೊರಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಂತೆ ನಾಯನ್ಮಾರಮೂಲೆಯ ಅಬ್ದುಲ್ ಖಾದರ್ ಎಂಬಾತನ ಮನೆಯಿಂದ ಒಂದು ಟನ್ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಯಿತು.
ಮಂಗಳವಾರ ಮುಂಜಾನೆ ಈ ಕಾರ್ಯಾಚರಣೆ ನಡೆದಿದೆ.
ಕ್ಯಾಂಪ್ ಆಫೀಸ್ ಬಳಿಯ ಮನೆಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಜನರು ಕಂಡ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ವಾಹನ ಚಾಲಕ ಶ್ರೀಜಿತ್ ಅವರು ಜಿಲ್ಲಾಧಿಕಾರಿ
ಡಾ.ಡಿ.ಸಜಿತ್ ಬಾಬು ಅವರಿಗೆ ಮಾಹಿತಿ ನೀಡಿದರು. ನಂತರ ಕಲೆಕ್ಟರ್ ಡಾ.ಡಿ.ಸಜೀತ್ ಬಾಬು ಮತ್ತು ಗನ್ ಮ್ಯಾನ್ ನೇರವಾಗಿ ಆ ಮನೆಗೆ ತೆರಳಿ ವೀಕ್ಷಿಸಿದರು. ಈ ವೇಳೆ ಮೂರು ಮಂದಿ ಮನೆಯ ಮುಂದೆ ನಿಲ್ಲಿಸಿದ್ದ ಲಾರಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಶ್ರೀಗಂಧವನ್ನು ಲೋಡ್ ಮಾಡುತ್ತಿದ್ದರು. ಜಿಲ್ಲಾಧಿಕಾರಿಗಳನ್ನು ಕಂಡ ತಕ್ಷಣ ಅಲ್ಲಿದ್ದವರು ಓಡಿ ಪರಾರಿಯಾದರು. ನಂತರ ಲಾರಿಯನ್ನು ಪರಿಶೀಲಿಸಿದಾಗ ಶ್ರೀಗಂಧದ ಕೊರಡುಗಳು ಪತ್ತೆಯಾಗಿವೆ. ತಂಡವು ಸಿಮೆಂಟ್ ಮಾರಾಟದ ಮರೆಯಲ್ಲಿ ಲಾರಿಯಲ್ಲಿ ಶ್ರೀಗಂಧವನ್ನು ಕಳ್ಳ ಸಾಗಾಟ ಮಾಡಲು ಯತ್ನಿಸಿರುವುದಾಗಿ ತಿಳಿದುಬಂದಿದೆ. ನಂತರದ ಶೋಧದಲ್ಲಿ ಮನೆಯ ಹಿಂದಿನ ಕೊಠಡಿಯಲ್ಲಿ 29 ಚೀಲ ಶ್ರೀಗಂಧದ ಕೊರಡುಗಳು ಪತ್ತೆಯಾಗಿವೆ. ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ವಶಪಡಿಸಿಕೊಂಡ ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ವಶಪಡಿಸಿಕೊಂಡ ಕೊರಡುಗಳ ಬೆಲೆ ಸುಮಾರು 2.50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಇದು ಅತಿ ದೊಡ್ಡ ಶ್ರೀಗಂಧದ ಬೇಟೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿ ಸಮಗ್ರ ತನಿಖೆ ಕೈಗೊಂಡಿದ್ದಾರೆ.