ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕಾಸರಗೋಡು:
ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದ್ದ ಕಾಡುಹಂದಿಗಳ ನಿಗ್ರಹಕ್ಕೆ ಕೇರಳ ಸರಕಾರದಿಂದ ಕೊನೆಗೂ ಹಸಿರು ನಿಶಾನೆ ಲಭಿಸಿದೆ. ಅದರಂತೆ ಕಾಸರಗೋಡು ಜಿಲ್ಲೆಯಲ್ಲಿ ನಿಬಂಧನೆಗಳೊಂದಿಗೆ ಕಾಡುಹಂದಿಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ.
ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಹತ್ತು ಮಂದಿ ಕೃಷಿಕರಿಗೆ ಕಾಡು ಹಂದಿಗಳನ್ನು ಕೊಲ್ಲಲು ಅರಣ್ಯ ಇಲಾಖೆಯು ಅನುಮತಿ ಮಂಜೂರುಗೊಳಿಸಿದೆ. ಜಿಲ್ಲೆಯ ಮುಳಿಯಾರಿನ ಇಬ್ಬರು, ಧರ್ಮತ್ತಡ್ಕ , ಕಿನ್ನಿಂಗಾರು, ಪಾಲಚ್ಚಾಲ್, ಕೋಡೋತ್, ಕೂಡ್ಲು, ಚೀಮೇನಿ, ಅಂಬಲತ್ತರ ಹಾಗೂ ಕಾನತ್ತೂರಿನ ತಲಾ ಒಬ್ಬ ಕೃಷಿಕಗೆ ಕಾಡುಹಂದಿಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ.
ಕಾಡುಹಂದಿಗಳನ್ನು ಬೇಟೆಯಾಡುವುದು ಅಥವಾ ಅವುಗಳಿಗೆ ತೊಂದರೆ ಕೊಡುವುದು ನಿಷಿದ್ಧವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕೃಷಿಕರು ಕಾಡುಹಂದಿಗಳ ಉಪಟಳದಿಂದ ಕಂಗಾಲಾಗಿದ್ದರು. ಈ ಬಗ್ಗೆ ಕೃಷಿಕರು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿರುವುದನ್ನು ಪತ್ತೆಹಚ್ಚಲಾಗಿದ್ದು , ಈ ಪ್ರದೇಶದಲ್ಲಿ ಕೃಷಿನಾಶ ವ್ಯಾಪಕವಾಗುತ್ತಿರುವುದನ್ನು ಮನಗಂಡು ಕಾಡುಹಂದಿಗಳ ನಿಗ್ರಹಕ್ಕೆ ಸರಕಾರವು ಮುಂದಾಗಿತ್ತು. ಪರವಾನಗಿ ಹೊಂದಿರುವ ಕೋವಿಯ ಮಾಲೀಕರಿಗೆ ಮಾತ್ರ ಹಂದಿ ಬೇಟೆಗೆ ಅವಕಾಶ ಕಲ್ಪಿಸಲಾಗಿದೆ.
ಕಾಡುಹಂದಿಗಳ ಉಪಟಳ ಹೊಂದಿರುವ ಪ್ರದೇಶಗಳ ಕೃಷಿಕರು ಮುಂಚಿತವಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಗಣಿಸಿ ಜಿಲ್ಲಾ ಅರಣ್ಯಾಧಿಕಾರಿಯವರು ಸಂಬಂದಪಟ್ಟವರಿಗೆ ಅನುಮತಿ ನೀಡಲಿದ್ದಾರೆ. ಈ ಅನುಮತಿ ಪತ್ರಕ್ಕೆ ಒಂದು ವರ್ಷದ ಕಾಲಾವಧಿಯಿರಲಿದೆ. ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ, ಅರಣ್ಯ ಇಲಾಖೆಯಲ್ಲಿ ನೋಂದಾಯಿಸಿರುವ ಕೋವಿಗಳ ಮಾಲೀಕರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾಡುಹಂದಿಗಳ ನಿಗ್ರಹ ನಡೆಯಲಿದೆ.
ಕಾರ್ಯಾಚರಣೆ ಮೂಲಕ ಗುಂಡಿಕ್ಕಿ ಕೊಲ್ಲಲಾಗುವ ಕಾಡುಹಂದಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೀಮೆಎಣ್ಣೆ ಸುರಿದು ಹೊತ್ತಿಸಬೇಕು ಅಥವಾ ಮಣ್ಣಿನಡಿ ಹೂತುಹಾಕಬೇಕು ಎಂದು ಅರಣ್ಯ ಇಲಾಖೆಯ ನಿರ್ದೇಶನದಲ್ಲಿ ತಿಳಿಸಲಾಗಿದೆ. ಈ ಮಧ್ಯೆ ಕಾಡುಹಂದಿಯನ್ನು ಉಪಟಳ ನೀಡುವ ಪ್ರಾಣಿ ಎಂದು ಪರಿಗಣಿಸುವಂತೆ ಕೇರಳ ಸರಕಾರವು ಕೇಂದ್ರ ಸರಕಾರಕ್ಕೆ ಈ ಹಿಂದೆಯೇ ಮನವಿ ಸಲ್ಲಿಸಿ ಆಗ್ರಹಿಸಿತ್ತು. ಇನ್ನೊಂದೆಡೆ ರಾಜ್ಯದ 12 ಮಂದಿ ಕೃಷಿಕರು ಕಾಡುಹಂದಿಗಳ ನಿಗ್ರಹಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ವಯ ಅವುಗಳ ನಿಗ್ರಹಕ್ಕೆ ಕೇರಳ ಹೈಕೋರ್ಟ್ ಕೂಡ ಒಪ್ಪಿಗೆ ಸೂಚಿಸಿತ್ತು.