Monday, August 15, 2022

Latest Posts

ಕಾಸರಗೋಡು| ಕಾರ್ಮಿಕರ ನಿರ್ಗಮನ: ಜಿಲ್ಲೆಯಿಂದ ಉತ್ತರಪ್ರದೇಶಕ್ಕೆ ಮೊದಲ ರೈಲು ಸಂಚಾರ

ಕಾಸರಗೋಡು: ಕಾಸರಗೋಡು ಜಿಲ್ಲೆಯಿಂದ ಉತ್ತರಪ್ರದೇಶಕ್ಕಿರುವ ಮೊದಲ ರೈಲು ಶುಕ್ರವಾರ ಕಾಞಂಗಾಡು ರೈಲು ನಿಲ್ದಾಣದಿಂದ ಹೊರಟಿತು. ಈ ಸಂದರ್ಭದಲ್ಲಿ ಊರಿಗೆ ತೆರಳುವ ಇರಾದೆ ಹೊಂದಿರುವ ಇತರ ರಾಜ್ಯಗಳ ಕಾರ್ಮಿಕರನ್ನು ಕಳುಹಿಸುವ ಉದ್ದೇಶದಿಂದ ಈ ಸೌಲಭ್ಯ ಏರ್ಪಡಿಸಲಾಗಿದೆ.

1462 ಮಂದಿ ಇತರ ರಾಜ್ಯಗಳ ಕಾರ್ಮಿಕರು ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯಿಂದ ಹೊರಟಿದ್ದಾರೆ. ಉತ್ತರ ಪ್ರದೇಶ ಮೂಲದ ಕಾರ್ಮಿಕರು ಈ ಬಗ್ಗೆ ಆಸಕ್ತಿ ಪ್ರಕಟಿಸಿದ್ದರು. ಮಹಿಳೆಯರಿಗೆ, ಮಕ್ಕಳಿಗೆ ಆದ್ಯತೆ ನೀಡಿ ಮೊದಲ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಜಿಲ್ಲೆಯ 11 ಗ್ರಾಮ ಪಂಚಾಯತ್ ಗಳಿಂದ, ಕಾಸರಗೋಡು, ಕಾಞಂಗಾಡು ನಗರಸಭೆಗಳಿಂದ ಮೊದಲ ಹಂತದಲ್ಲಿ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು.

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ 1462 ಮಂದಿಯ ವೈದ್ಯಕೀಯ ತಪಾಸಣೆ ಪೂರ್ಣಗೊಳಿಸಿ ನಾನ್ ಕೋವಿಡ್ ಸರ್ಟಿಫಿಕೇಟ್ ವಿತರಣೆ ನಡೆಸಲಾಗಿದೆ.

ಶುಕ್ರವಾರ ರಾತ್ರಿ 9.30ಕ್ಕೆ ಕಾಞಂಗಾಡು ರೈಲು ನಿಲ್ದಾಣದಿಂದ ರೈಲು ಹೊರಟಿದ್ದು, ಲಕ್ನೋ ಗೆ ತಲುಪಲಿದೆ. ಸಿದ್ಧಪಡಿಸಲಾದ ಪಟ್ಟಿಯಲ್ಲಿ 1468 ಮಂದಿ ಇದ್ದು, ರೈಲು ಹೊರಡುವ ವೇಳೆ 1462 ಮಂದಿ ಪ್ರಯಾಣಿಕರಿದ್ದರು. ಸಂಜೆ 4.30ರ ವೇಳೆ ರೈಲು ನಿಲ್ದಾಣಕ್ಕೆ ಬಂದು ಸೇರಿದ ಪ್ರಯಾಣಿಕರಿಗೆ ಕೇರಳ ಸರಕಾರ ಸೂಚಿಸಿದ್ದ ರೀತಿಯ ಆಹಾರದ ಪೊಟ್ಟಣ ನೀಡಿ, ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ನಡೆಸುವ ಮಾಹಿತಿ ಒದಗಿಸಲಾಗಿತ್ತು.

ಪಂಚಾಯತ್ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಕೆ.ರೆಜಿಕುಮಾರ್ ರೈಲು ಪ್ರಯಾಣಕ್ಕೆ ಹಸುರು ನಿಶಾನೆ ತೋರಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರು ರೈಲು ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರಿಗೆ ವಿದಾಯ ಕೋರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss