ಕಾಸರಗೋಡು: ಕಾಸರಗೋಡು ಜಿಲ್ಲೆಯ ಪಿಲಿಕೋಡು ಗ್ರಾಮ ಪಂಚಾಯತ್ ನ ಕಾಲಿಕಡವು ಮಿನಿ ಸ್ಟೇಡಿಯಂ ನಿರ್ಮಾಣವನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದ್ದಾರೆ. ಈ ಸ್ಟೇಡಿಯಂ ನಿರ್ಮಾಣಕ್ಕೆ ಪ್ಯಾಕೇಜ್ ನ ಜಿಲ್ಲಾ ಮಟ್ಟದ ಸಮಿತಿಯು ಆಡಳಿತ ಮಂಜೂರಾತಿ ನೀಡಿದೆ. 2.35 ಕೋಟಿ ರೂ. ಮೊತ್ತವನ್ನು ಈ ಯೋಜನೆಗಾಗಿ ಮೀಸಲಿರಿಸಲಾಗಿದೆ. ಪಿಲಿಕೋಡು ಗ್ರಾಮ ಪಂಚಾಯತ್ 35 ಲಕ್ಷ ರೂ., ಉಳಿದ 2 ಕೋಟಿ ರೂ. ಮೊತ್ತವನ್ನು ಜಿಲ್ಲಾ ಅಭಿವೃದ್ಧಿ ಪ್ಯಾಕೇಜ್ ನೀಡಲಿದೆ.
ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ನ ಅಂಗವಾಗಿ ಮೊದಲ ಹಂತದ ಚಟುವಟಿಕೆಗಳಿಗೆ 2.35 ಕೋಟಿ ರೂ.ಗಳ ಅನುದಾನ ಲಭಿಸಲಿದೆ. 8 ಮೀಟರ್ ಎತ್ತರದಲ್ಲಿ ಟ್ರಸ್ ಡ್ ರೂಫ್ ಮೇಲ್ಛಾವಣಿಯೊಂದಿಗಿನ ಸ್ಟೇಜ್, 20 ಸೆ.ಮೀ. ಮೀರದ ಮಣ್ಣು ತುಂಬಿ ಎತ್ತರಿಸಿದ ಮೈದಾನ, 2 ಅಂತಸ್ತಿನಲ್ಲಿ ಮಹಿಳಾ, ಪುರುಷ ಕ್ರೀಡಾಳುಗಳ ವಿಶ್ರಾಂತಿ ಕೊಠಡಿಗಳು, ವಸತಿ ಸೌಲಭ್ಯಗಳು, ಶೌಚಾಲಯಗಳು, ಕಚೇರಿ ಕಂ ತತ್ಸಂಬಂಧಿ ಸೌಲಭ್ಯಗಳು ಯೋಜನೆಯಲ್ಲಿ ಒಳಗೊಂಡಿವೆ.
2 ಅಂತಸ್ತಿನ ಕಟ್ಟಡದ ಎರಡೂ ಬದಿಗಳಲ್ಲಿ 6 ಸಾಲುಗಳಾಗಿ ಕಾಂಕ್ರೀಟ್ ಗ್ಯಾಲರಿ ಸೌಲಭ್ಯ ಸಿದ್ಧಪಡಿಸಲಾಗುವುದು. ಜೊತೆಗೆ ಬೋರ್ ವೆಲ್ ಸಹಿತ ನೀರಾವರಿ ಯೋಜನೆಗಳು, ಕಟ್ಟಡದ ವಿದ್ಯುದೀಕರಣ ಇತ್ಯಾದಿಗಳಿಗೆ ಯೋಜನೆಯಲ್ಲಿ ಮೊಬಲಗು ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಸ್ಟೇಡಿಯಂ ನಿರ್ಮಾಣಕ್ಕಾಗಿ ತ್ರಿಕರೀಪುರ ಶಾಸಕ ಎಂ.ರಾಜಗೋಪಾಲನ್ ಮತ್ತು ಪಿಲಿಕೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ಪಿ.ಶ್ರೀಧರನ್ ಅವರು ಕೇರಳ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.