ಕಾಸರಗೋಡು: ಕೇರಳದಲ್ಲಿ ಜೂನ್ 1ರಂದು ಶಾಲೆಗಳನ್ನು ತೆರೆಯದಿರಲು ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಧಾರದ ಪ್ರಕಾರ ಶಾಲೆಗಳನ್ನು ತೆರೆಯುವ ದಿನಾಂಕವನ್ನು ಮುಂದೆ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.
ಇದೇ ವೇಳೆ ರಾಜ್ಯದಲ್ಲಿ ಆನ್ ಲೈನ್ ತರಗತಿಗಳು ಈ ಮೊದಲೇ ತೀರ್ಮಾನಿಸಿದಂತೆ ಜೂನ್ 1ರಂದು ಪ್ರಾರಂಭವಾಗುತ್ತದೆ. ಇದಕ್ಕಾಗಿ ಅಧ್ಯಾಪಕರು ಹಾಗೂ ಮಕ್ಕಳು ಶಾಲೆಗೆ ಹಾಜರಾಗುವುದು ಬೇಡ ಎಂದು ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಿರುವನಂತಪುರದಲ್ಲಿ ನಡೆದ Quality Improvement Program (QIP) ಸಮಿತಿಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ವಿಕ್ಟರ್ಸ್ ಚಾನೆಲ್ ಮೂಲಕ ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆಯ ವರೆಗೆ ವಿವಿಧ ತರಗತಿಗಳಿಗೆ ಆನ್ ಲೈನ್ ಕ್ಲಾಸ್ ನಡೆಯಲಿದೆ. ಪ್ರಾಥಮಿಕ ವಿಭಾಗಕ್ಕೆ ಅರ್ಧ ಗಂಟೆ, ಹೈಸ್ಕೂಲ್ ವಿಭಾಗಕ್ಕೆ ಒಂದು ಗಂಟೆ, ಎಚ್ ಎಸ್ಎಸ್ ವಿಭಾಗಕ್ಕೆ ಒಂದೂವರೆ ಗಂಟೆ ಕ್ಲಾಸ್ ನಿಗದಿಪಡಿಸಲಾಗಿದೆ. ಆನ್ ಲೈನ್ ತರಗತಿಯನ್ನು ವೀಕ್ಷಿಸಲು ಇಂಟರ್ನೆಟ್ ಅಥವಾ ಟಿವಿ ಸೌಕರ್ಯ ಇಲ್ಲದವರಿಗೆ ವಾಚನಾಲಯ, ಕುಟುಂಬಶ್ರೀ ಮೊದಲಾದವುಗಳ ಮೂಲಕ ಸೌಲಭ್ಯ ಒದಗಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.