Tuesday, August 16, 2022

Latest Posts

ಕಾಸರಗೋಡು ಜಿಲ್ಲಾ ಬಿಜೆಪಿ ಬೇಡಿಕೆ ಈಡೇರಿಕೆ: ಗಡಿ ರಸ್ತೆಗಳಲ್ಲಿನ ಮಣ್ಣು ತೆರವುಗೊಳಿಸಲು ಕರ್ನಾಟಕ ಸಚಿವರ ಆದೇಶ

ಕಾಸರಗೋಡು: ಕೇರಳ – ಕರ್ನಾಟಕ ಗಡಿ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ  ಮಣ್ಣು ಹಾಕಿ ಮುಚ್ಚಲಾಗಿದ್ದು , ಅದನ್ನು ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ವಹಿಸಿರುವ ಕರ್ನಾಟಕ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬಿಜೆಪಿ ನೇತಾರರ ಬೇಡಿಕೆಯ ಹಿನ್ನೆಲೆಯಲ್ಲಿ  ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಗಡಿ ಹೊಂದಿರುವ ಕಾಸರಗೋಡು ಜಿಲ್ಲೆಯ ಮುಖ್ಯರಸ್ತೆಗಳಲ್ಲಿ ಮಣ್ಣನ್ನು ಕೂಡಲೇ ತೆರವುಗೊಳಿಸಲು ಆದೇಶ ಹೊರಡಿಸಿದ್ದಾರೆ.  ಇದರಲ್ಲಿ ದೇಲಂಪಾಡಿಯ ಬೆಳ್ಳಿಪ್ಪಾಡಿ, ಪನತ್ತಡಿಯ ಕಲ್ಲಾಪಳ್ಳಿ , ಎಣ್ಮಕಜೆ ಪಂಚಾಯತ್ ನ ಗಡಿ ಹೊಂದಿರುವ ಸಾರಡ್ಕ ಸಹಿತ ಕಾಸರಗೋಡು ಜಿಲ್ಲೆಯ ಪ್ರಧಾನ ರಸ್ತೆಗಳಲ್ಲಿನ ಮಣ್ಣು ತೆರವುಗೊಳಿಸಿ ಅಂತಾರಾಜ್ಯ ಸಂಚಾರಕ್ಕೆ ಅನುಮತಿ ನೀಡಿ
ಆದೇಶಿಸಿದ್ದಾರೆ.
ಗಡಿ ರಸ್ತೆಗಳನ್ನು ತೆರವುಗೊಳಿಸಿ ಗಡಿ ಗ್ರಾಮಗಳಲ್ಲಿನ ಜನರಿಗೆ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನೇತಾರರೊಂದಿಗೆ ಕಳೆದ ದಿನ ಗಡಿ ಪ್ರದೇಶವಾದ ಎಣ್ಮಕಜೆಯ ಸಾರಡ್ಕ , ದೇಲಂಪಾಡಿಯ ಬೆಳ್ಳಿಪ್ಪಾಡಿ, ಮುಡೂರು ಮುಂತಾದ ಪ್ರದೇಶಗಳಿಗೆ ಭೇಟಿ ನೀಡಲಾಗಿತ್ತು.
ಅಲ್ಲದೆ ಕಾಸರಗೋಡು ಜಿಲ್ಲಾ ಬಿಜೆಪಿ ನಿಯೋಗವು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿತ್ತು.
ಅಲ್ಲದೆ ಈ ಹಿಂದೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಗಡಿ ರಸ್ತೆಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರ ನೇತೃತ್ವದಲ್ಲಿ ತಲಪ್ಪಾಡಿಯಲ್ಲಿ  ಪ್ರತಿಭಟನೆ ನಡೆಸಲಾಗಿತ್ತು. ಎರಡೂ ಜಿಲ್ಲೆಗಳ ಪ್ರಧಾನ ರಸ್ತೆಗಳ ಮೂಲಕ ಸಂಚಾರ ನಡೆಸಲು ಅನುಮತಿ ದೊರೆತಿರುವುದರೊಂದಿಗೆ ಕಾಸರಗೋಡು ಜಿಲ್ಲೆಯ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಲಿದೆ ಎಂಬುದಾಗಿ ಕೆ.ಶ್ರೀಕಾಂತ್ “ಹೊಸ ದಿಗಂತ “ಕ್ಕೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss