ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 70ನೇ ಜನ್ಮದಿನ ಸಂಭ್ರಮದ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜಕೀಯ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿ ಅಂತಾರಾಷ್ಟ್ರೀಯ ಮಟ್ಟದಲ್ಲೇ ಗುರುತಿಸಲ್ಪಟ್ಟಿರುವ ಮೋದಿಯವರ ಹುಟ್ಟುಹಬ್ಬವನ್ನು ವಿಭಿನ್ನ ಸೇವಾ ಚಟುವಟಿಕೆಗಳನ್ನು ಕೈಗೊಂಡು ಕಾರ್ಯಕರ್ತರು ಸಂಭ್ರಮಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೀಡಿರುವ ಕರೆಯಂತೆ ಕಾಸರಗೋಡು ಜಿಲ್ಲೆಯಲ್ಲೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇದರ ಅಂಗವಾಗಿ ವಾರ್ಡ್ ಮಟ್ಟದಲ್ಲಿ ಹಿರಿಯ ಸಾಧಕರನ್ನು ಗೌರವಿಸುವುದು, ಶುಚೀಕರಣ ಯಜ್ಞ , ರಕ್ತದಾನ ಶಿಬಿರ, ಬಡವರ ಮನೆ ದುರಸ್ತಿ , ವಿಕಲಚೇತನರಿಗೆ ಸಹಾಯ ವಿತರಣೆ, ಆಹಾರ ಸಾಮಗ್ರಿ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಮಂಜೇಶ್ವರ, ಮಂಗಲ್ಪಾಡಿ, ಪೈವಳಿಕೆ, ಕುಂಬಳೆ, ಬದಿಯಡ್ಕ , ಮಧೂರು ಮುಂತಾದ ಗ್ರಾಪಂಗಳ ಮಟ್ಟದಲ್ಲಿ ಶುಚೀಕರಣ ಹಾಗೂ ಹಿರಿಯ ಸಾಧಕ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಯಿತು.
ಇದೇ ವೇಳೆ ಭಾರತೀಯ ಜನತಾ ಯುವಮೋರ್ಚಾದ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ 70 ಮಂದಿ ಯುವಮೋರ್ಚಾ ಕಾರ್ಯಕರ್ತರು ಗುರುವಾರ ರಕ್ತದಾನ ನಡೆಸಿದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ನಡೆಸಲಾಯಿತು. ಜನರಲ್ ಆಸ್ಪತ್ರೆಯಲ್ಲಿ ಜರಗಿದ ರಕ್ತದಾನ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರು ತಾವು ಸ್ವತಹ ರಕ್ತದಾನ ಮಾಡುವುದರ ಮೂಲಕ ಉದ್ಘಾಟಿಸಿದರು. ಬಳಿಕ 15 ಮಂದಿ ಪ್ರಥಮ ಹಂತದಲ್ಲಿ ರಕ್ತದಾನ ಮಾಡಿದರು. ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು, ಪ್ರಮುಖರಾದ ಜಿತೇಂದ್ರ ಎನ್.ಎ., ಅಂಜು ಜೋಸ್ಟಿ , ಅಜಿತ್ ಕಡಪ್ಪುರ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.