ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 4 ಮಂದಿ ಕೊರೋನಾ ವೈರಸ್ ಬಾಧಿತರನ್ನು ಗುರುತಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಮಂಜೇಶ್ವರ ತಾಲೂಕು ವ್ಯಾಪ್ತಿಯ ಕುಂಬಳೆ, ಮಂಗಲ್ಪಾಡಿ, ಪೈವಳಿಕೆ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ 144 ಸೆಕ್ಷನ್ ನ್ನು ಜಾರಿಗೊಳಿಸಲಾಗಿದೆ.
ಸೋಮವಾರ ದೃಢಗೊಂಡ ಕೋವಿಡ್ – 19 ಸೋಂಕು ಬಾಧಿತರು ಕುಂಬಳೆ, ಮಂಗಲ್ಪಾಡಿ, ಪೈವಳಿಕೆ ಪಂಚಾಯತ್ ಪ್ರದೇಶಗಳ ನಿವಾಸಿಗಳು ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
144 ಸೆಕ್ಷನ್ ಹೇರಿರುವ ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಸಾರಿಗೆ ಸಂಚಾರಕ್ಕೆ ಸಾಧ್ಯವಿರುವಷ್ಟು ಬ್ರೇಕ್ ಹಾಕಲಾಗಿದೆ.
144 ಸೆಕ್ಷನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅತೀ ಆವಶ್ಯಕ ವಿಚಾರಗಳಿಗೆ ಮಾತ್ರ ಮನೆಯಿಂದ ಹೊರಗೆ ಬಂದರೆ ಸಾಕೆಂದು ಕುಂಬಳೆ ಹಾಗೂ ಮಂಜೇಶ್ವರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಾಹನಗಳಲ್ಲಿ ಅನಗತ್ಯವಾಗಿ ತಿರುಗಾಡುವುದು ಕಂಡುಬಂದಲ್ಲಿ ಅಂತವರನ್ನು ಬಂಧಿಸಿ ಕೇಸು ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.