Wednesday, August 17, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾದೊಂದಿಗೆ ಡೆಂಗ್ಯೂ ರಣಕೇಕೆ: 250ರಷ್ಟು ಮಂದಿ ಆಸ್ಪತ್ರೆಗಳಲ್ಲಿ ದಾಖಲು

ಕಾಸರಗೋಡು:  ಜಿಲ್ಲೆಯಲ್ಲಿ ಕೊರೋನಾ ಆತಂಕದ ನಡುವೆ ಹಲವೆಡೆ ವ್ಯಾಪಕ ಪ್ರಮಾಣದಲ್ಲಿ ಡೆಂಗ್ಯೂ ಜ್ವರ ಹರಡುತ್ತಿದ್ದು , ಈಗಾಗಲೇ 250ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಜೇಶ್ವರ, ವರ್ಕಾಡಿ, ಪೈವಳಿಕೆ, ಪುತ್ತಿಗೆ, ಕುಂಬಳೆ, ಬದಿಯಡ್ಕ,ಕಾರಡ್ಕ , ದೇಲಂಪಾಡಿ, ಪುಲ್ಲೂರು ಪೆರಿಯ ಮುಂತಾದ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಡೆಂಗ್ಯೂ ಹೆಚ್ಚುತ್ತಿದ್ದು ಒಂದೆಡೆ ಕೊರೋನಾ ಭೀತಿಯ ಮಧ್ಯೆ ಸಾಂಕ್ರಾಮಿಕ ರೋಗಗಳು ಜನಸಾಮಾನ್ಯರನ್ನು ಹಾಗೂ ಆರೋಗ್ಯ ಇಲಾಖೆಯನ್ನು ಆತಂಕಕ್ಕೆ ಸಿಲುಕಿಸಿದೆ. ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಿನಂಪ್ರತಿ ನೂರಾರು ಮಂದಿ
ರೋಗಿಗಳು ತಲಪುತ್ತಿದ್ದು ಈ ಪೈಕಿ ಹಲವು ಜನರಿಗೆ ಡೆಂಗ್ಯೂ ದೃಢಪಟ್ಟಿದೆ.
ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲೂ ಡೆಂಗ್ಯೂ ಪತ್ತೆಯಾಗಿದೆ. ಪೈವಳಿಕೆ, ಬಾಯಾರು, ಚಿಪ್ಪಾರು, ಕುಂಬಳೆ, ಸೀತಾಂಗೋಳಿ, ದರ್ಬೆತ್ತಡ್ಕ, ಪುತ್ತಿಗೆ, ಮುಗು, ಧರ್ಮತ್ತಡ್ಕ, ನೀರ್ಚಾಲು, ಬದಿಯಡ್ಕ , ಕುಂಬ್ಡಾಜೆ, ವಳಕ್ಕುಂಜ, ಅದೂರು, ಮುಳ್ಳೇರಿಯ, ಮಿಂಚಿಪದವು, ಕರ್ಮ0ತ್ತೋಡಿ ಮೊದಲಾದೆಡೆಗಳಲ್ಲಿ ಡೆಂಗ್ಯೂ ಹಾವಳಿ ವಿಪರೀತವಾಗಿದೆ. ಮುಳ್ಳೇರಿಯ ವ್ಯಾಪ್ತಿಯ 85, ಬದಿಯಡ್ಕ ವ್ಯಾಪ್ತಿಯ 105 ಮಂದಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಿರೀಕ್ಷಿತ ಬೇಸಿಗೆ ಮಳೆ, ನಿಧಾನಗತಿಯ ಮುಂಗಾರು ಮಳೆಯ ಕಾರಣಗಳಿಂದ ಮಾಲಿನ್ಯಗಳು ತೊಳೆದುಹೋಗದೆ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಜೊತೆಗೆ ತುರಿಕೆ, ಕೆಮ್ಮು, ಶೀತ, ತಲೆನೋವು ಸಹಿತ ಇತರ ಜ್ವರಗಳು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.
ಕೊರೋನಾ ಮಹಾಮಾರಿ ಜೊತೆಗೆ ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಜನಸಾಮಾನ್ಯರ ದೈನಂದಿನ ಜೀವನಕ್ಕೆ ಸವಾಲಾಗಿ ಪರಿಣಮಿಸಿದೆ.
ಇದೇ ವೇಳೆ ಈ ಮೊದಲು ಡೆಂಗ್ಯೂ ವಿನಂತಹ ಪಿಡುಗುಗಳ ಚಿಕಿತ್ಸೆಗೆ ಕಾಸರಗೋಡಿನ ಜನರು ಮಂಗಳೂರಿನ ಆಸ್ಪತ್ರೆಗಳಲ್ಲಿ
ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿ ಮುಚ್ಚುಗಡೆಗೊಂಡಿದ್ದು , ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕಾಸರಗೋಡಿನಲ್ಲಿ ಅಗತ್ಯದ ಚಿಕಿತ್ಸಾ ಸೌಕರ್ಯಗಳು ಇಲ್ಲದಿರುವುದರಿಂದ ಕಣ್ಣೂರು ಜಿಲ್ಲೆಯ ಪರಿಯಾರಂ ವೈದ್ಯಕೀಯ ಕಾಲೇಜಿಗೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ.
ಇದರಿಂದಾಗಿ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಭಾರೀ ಆರ್ಥಿಕ ಸಂದಿಗ್ದತೆ, ಸಂಚಾರ ಸೌಕರ್ಯ ವೆಚ್ಚ ಸಹಿತ ಇನ್ನಿತರ ಜಟಿಲ ಸಮಸ್ಯೆಗಳು ತಲೆದೋರಿವೆ. ಕಾಸರಗೋಡು ಜಿಲ್ಲಾಡಳಿತವು ಕೂಡಲೇ ಈ ಬಗ್ಗೆ ಗಮನಿಸಿ ಡೆಂಗ್ಯೂ ಹಾವಳಿಯನ್ನು ಹತೋಟಿಗೆ ತರಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!