ಕಾಸರಗೋಡು: ಕೋವಿಡ್ ವ್ಯಾಪಿಸಿದ ಹಿನ್ನೆಲೆಯಲ್ಲಿ ಮೊಟಕುಗೊಂಡಿದ್ದ ಖಾಸಗಿ ಬಸ್ ಗಳ ಸಂಚಾರ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಕಾಸರಗೋಡು ನಗರದಿಂದ ಜಿಲ್ಲೆಯ ವಿವಿಧೆಡೆಗೆ ಬಸ್ ಗಳ ಸರ್ವೀಸ್ ಅಧಿಕಗೊಳ್ಳುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಜನಜೀವನವು ಸಹಜ ಸ್ಥಿತಿಯತ್ತ ಮರಳುತ್ತಿದೆ.
ಕುಂಬಳೆ, ಬದಿಯಡ್ಕ , ಮಾನ್ಯ , ನೀರ್ಚಾಲು, ಹೊಸದುರ್ಗ, ಬಂದಡ್ಕ ಮೊದಲಾದ ಕಡೆಗಳಿಗೆ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಟ್ರಾಫಿಕ್ ಜಂಕ್ಷನ್ ಮೂಲಕ ಬಸ್ ಸಂಚಾರ ನಡೆಯುತ್ತಿದೆ. ಬುಧವಾರ ನಾಲ್ಕು ಬಸ್ ಗಳು ಸಂಚಾರ ಆರಂಭಿಸಿದ್ದರೆ, ಗುರುವಾರ ಅದಕ್ಕಿಂತ ಹೆಚ್ಚು ಬಸ್ ಗಳು ಓಡಾಟ ನಡೆಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್ ಗಳು ಸರ್ವೀಸ್ ನಡೆಸುವ ಸಾಧ್ಯತೆಯಿದೆ.
ಇದೇ ವೇಳೆ ಕಾಸರಗೋಡಿನಿಂದ ಬದಿಯಡ್ಕ ವರೆಗೆ ಬಸ್ ಸಂಚಾರ ಆರಂಭಗೊಂಡಿದ್ದರೂ ಪೆರ್ಲ ಭಾಗಕ್ಕೆ ಬಸ್ ಸೌಕರ್ಯ ಇಲ್ಲದಿರುವುದು ಅಲ್ಲಿನವರಿಗೆ ಭಾರೀ ಸಮಸ್ಯೆ ತಂದೊಡ್ಡಿದೆ. ಕೋವಿಡ್ ಹೆಚ್ಚಳಗೊಂಡ ಕಾರಣ ಹಲವು ತಿಂಗಳುಗಳಿಂದ ವಾಹನ ಸೌಲಭ್ಯ ಮೊಟಕುಗೊಂಡು ಸಂಚಾರ ತಡೆ ಜಾರಿಯಲಿದ್ದ ನಿಟ್ಟಿನಲ್ಲಿ ಪೆರ್ಲ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಈ ಮಧ್ಯೆ ಕಾಸರಗೋಡಿನಿಂದ ಕುಂಬಳೆ ತನಕ ಸಂಚರಿಸುವ ಬಸ್ ಗಳು ತಲಪ್ಪಾಡಿ ವರೆಗೆ ಸರ್ವೀಸ್ ನಡೆಸಬೇಕೆಂಬ ಬೇಡಿಕೆ ಹೆಚ್ಚಿದೆ.
ಬಸ್ ಸಂಚಾರ ಆರಂಭಗೊಂಡ ಹಿನ್ನೆಲೆಯಲ್ಲಿ ಜನರು ಕೂಡ ಸಂಚಾರ ಆರಂಭಿಸಿದ್ದಾರೆ ಎಂದು ಬಸ್ ಸಿಬ್ಬಂದಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎಂದು ಅವರು ಅಂದಾಜಿಸಿದ್ದಾರೆ. ಇನ್ನೊಂದೆಡೆ ಪ್ರಯಾಣಿಕರ ಸೌಕರ್ಯಾರ್ಥ ಈಗ ಸಮಯ ನೋಡದೆ ಬಸ್ ಸಂಚಾರ ನಡೆಯುತ್ತಿದೆ. ಬಸ್ ಸಂಚಾರ ಸಂಖ್ಯೆ ಹೆಚ್ಚಳಗೊಂಡ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಬಹುತೇಕ ಭಾಗಗಳು ಸಕ್ರಿಯಗೊಳ್ಳುವತ್ತ ಹೆಜ್ಜೆಹಾಕಿವೆ.