ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ಕೊರೋನಾ ಉಲ್ಬಣಗೊಳ್ಳಲು ಪಿಣರಾಯಿ ವಿಜಯನ್ ಸರಕಾರ ಮತ್ತು ಸಿಪಿಎಂ ಕಾರಣವೆಂದು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
ಅವರು ಆನ್ ಲೈನ್ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಮಾನವ ಕಳ್ಳಸಾಗಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪೈವಳಿಕೆ ಚಿಪ್ಪಾರು ಪರಿಸರದ ನಿವಾಸಿಯಾದ ಮಂಜೇಶ್ವರ ತಾಲೂಕು ವ್ಯಾಪ್ತಿಯ ಸಿಪಿಎಂ ನಾಯಕನೋರ್ವ ಅನಧಿಕೃತವಾಗಿ ಮಹಾರಾಷ್ಟ್ರದಿಂದ ಬಂದ ಕೊರೋನಾ ಪೀಡಿತ ತನ್ನ ಸಂಬಂಧಿಕನನ್ನು ಸಾರ್ವಜನಿಕವಾಗಿ ಮನೆಗೆ ತಲುಪಿಸಿದ್ದು, ಆ ನಾಯಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆ.ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಜಿಲ್ಲೆಯ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ನೇತೃತ್ವದಲ್ಲಿ ಕಾನೂನು ಜಾರಿ ಇದ್ದರೂ ಆಡಳಿತ ಪಕ್ಷದ ನೇತಾರ ಎಂಬ ನೆಲೆಯಲ್ಲಿ ಅನಧಿಕೃತವಾಗಿ ತಲಪ್ಪಾಡಿ ಗಡಿಯಿಂದ ರೋಗ ಬಾಧಿತನಾದ ಸಂಬಂಧಿಕನನ್ನು ಮನೆಗೆ ತಲುಪಿಸಲಾಗಿದೆ.
ಕೋವಿಡ್ – 19 ವಿರುದ್ಧ ನಡೆಸುವ ಚಟುವಟಿಕೆಗಳು ತನಗೆ ಬಾಧಕವಲ್ಲ ಎಂಬ ರೀತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ದುರುಪಯೋಗ ಪಡಿಸಲಾಗಿದೆ. ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆ ಗಳಿಗೆ ಚಿಕಿತ್ಸೆ ನೀಡುವ ಜಿಲ್ಲಾಸ್ಪತ್ರೆಯ ಇಡೀ ವ್ಯವಸ್ಥೆಯನ್ನೇ ಈ ಸಿಪಿಎಂ ಮುಖಂಡ ನಿಲುಗಡೆ ಮಾಡುವಂತೆ ಮಾಡಿದ್ದಾರೆ. ಅಲ್ಲಿಯ ಸಿಬ್ಬಂದಿಗಳನ್ನು, ವೈದ್ಯರನ್ನು ನಿಗಾಕ್ಕೆ ತೆರಳುವಂತೆ ಮಾಡಿದ್ದಾರೆ.
ಸಾಮಾನ್ಯ ಜನರನ್ನು ತಲಪ್ಪಾಡಿ ಗಡಿಯಲ್ಲಿ ಗಂಟೆಗಟ್ಟಲೆ ಸರದಿ ಸಾಲಲ್ಲಿ ನಿಲ್ಲಿಸುವ ಜಿಲ್ಲಾಡಳಿತವು ರಾಜ್ಯದ ಆಡಳಿತ ಪಕ್ಷವಾದ ಸಿಪಿಎಂನ ಪ್ರತಿನಿಧಿ ಎಂಬ ನೆಲೆಯಲ್ಲಿ ತಮ್ಮ ಪಕ್ಷದವರನ್ನು ಗಡಿ ದಾಟಿಸುವ ಕೆಲಸದಲ್ಲಿ ತೊಡಗಿದೆ. ಅದೇ ರೀತಿಯಲ್ಲಿ ಮರಣ ಹೊಂದಿದವರ ಮೃತದೇಹಗಳನ್ನು ತರಲು ಆಡಳಿತ ಪಕ್ಷದವರಿಗೆ ಮಾತ್ರ ಅವಕಾಶ ನೀಡುವಂತಹ ಕೆಲಸಗಳು ನಡೆಯುತ್ತಿವೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದೆ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂದು ಕೆ.ಶ್ರೀಕಾಂತ್ ಎಚ್ಚರಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ವೆಬ್ ಪ್ರೆಸ್ ಮೀಟ್ ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳ ಹಾಗೂ ಈ ನಿಟ್ಟಿನಲ್ಲಿ ಕಾನೂನು ಉಲ್ಲಂಘನೆ ಬಗ್ಗೆ ವಿವರಿಸಿದರು.