ಹೊಸ ದಿಗಂತ ವರದಿ, ಕಾಸರಗೋಡು:
ವಿವಾಹ ಸಹಿತ ಸಮಾರಂಭಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಮುಂಗಡ ಅನುಮತಿ ಕಡ್ಡಾಯ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ತಿಳಿಸಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ರೀತಿ ಅನುಮತಿ ಪಡೆಯುವ ವೇಳೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್, ಆರೋಗ್ಯ ಕೇಂದ್ರದ ಆರೋಗ್ಯ ಇನ್ಸ್ಪೆಕ್ಟರ್ ಅವರ ಅನುಮತಿ ಸಹಿತ ಪಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳು ಸಂಬಂಧಪಟ್ಟ ಸ್ಟೇಷನ್ ಹೌಸ್ ಆಫೀಸರ್ಗಳ, ಆರೋಗ್ಯ ಇನ್ಸ್ಪೆಕ್ಟರ್ಗಳ ವಾಟ್ಸ್ ಆ್ಯಪ್ ನಂಬ್ರ ಪಡೆದಿರಬೇಕು. ಅನುಮತಿ ನೀಡುವ ವೇಳೆಯೂ ಅನುಮತಿ ಪತ್ರದ ನಕಲು ವಾಟ್ಸ್ ಆ್ಯಪ್ ಮೂಲಕ ರವಾನಿಸಬೇಕು. ಈ ಸಂಬಂಧ ಸಮಗ್ರ ಮಾಹಿತಿ ಹೊಂದಿರುವ ಆದೇಶ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಳುಹಿಸುವಂತೆ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಅವರಿಗೆ ಆದೇಶಿಸಲಾಗಿದೆ.
ಇಟೆಲಿ, ಯು.ಕೆ. ಸಹಿತ ಯೂರೋಪ್ಯನ್ ರಾಷ್ಟ್ರ ಗಳಿಂದ ಬಂದವರು ರೂಮ್ ಕ್ವಾರೆಂಟೈನ್ ಪ್ರವೇಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ತಿಳಿಸಿದರು. ಕೋವಿಡ್ ಸೋಂಕು ಹೊಸರೂಪು ಪಡೆದು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ರೋಗ ಲಕ್ಷಣ ಹೊಂದಿರುವವರು ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಭೇಟಿ ಮಾಡಬೇಕು ಎಂದವರು ನುಡಿದರು.
ಈ ನಿಟ್ಟಿನಲ್ಲಿ ವಿದೇಶಗಳಿಂದ ಮರಳುವ ಮಂದಿ ಪೊಲೀಸ್, ಡಿಡಿಪಿ ಅವರಿಗೆ ವಾಟ್ಸ್ ಆ್ಯಪ್ ಮೂಲಕ ಮಾಹಿತಿ ನೀಡಬೇಕು. ಮಂಗಳೂರು ವಿಮಾನ ನಿಲ್ದಾಣ ಮೂಲಕ ಊರಿಗೆ ಮರಳುವವರ ಮಾಹಿತಿ ಒದಗಿಸುವಂತೆ ದಕ್ಷಿಣ ಕನ್ನಡ ಡೆಪ್ಯೂಟಿ ಕಮೀಷನರ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕೋವಿಡ್ ಪ್ರತಿರೋಧ ಅಂಗವಾಗಿ ಎಲ್ಲ ಕ್ರಮಗಳನ್ನೂ ಕಟ್ಟುನಿಟ್ಟಿನಿಂದ ಮುಂದುವರಿಸಲಾಗುವುದು. ಜನಗುಂಪು ಸೇರುವುದು, ಪಂದ್ಯಾಟ ನಡೆಸುವುದು, ಉತ್ಸವ ಆಚರಣೆ ಇತ್ಯಾದಿಗಳಿಗೆ ಅನುಮತಿಯಿಲ್ಲ. ಜಿಲ್ಲೆಯ ಹಲವೆಡೆ ರಾತ್ರಿ 9 ಗಂಟೆಯ ನಂತರವೂ ತಳ್ಳುಗಾಡಿಗಳ ಚಟುವಟಿಕೆ ನಡೆಯುತ್ತಿರುವ ಮಾಹಿತಿಗಳಿದ್ದು , ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಹೈಯರ್ ಸೆಕೆಂಡರಿ, ಪ್ರೌಢಶಾಲೆ ಶಿಕ್ಷಕರಿಗೆ ಶಾಲಾರಂಭ ಸಂಬಂಧ ಹೊಣೆಗಾರಿಕೆ ಇರುವ ನಿಟ್ಟಿನಲ್ಲಿ ಡಿಡಿಇ ಅವರ ಮನವಿ ಹಿನ್ನೆಲೆಯಲ್ಲಿ ಇಂತಹ ಶಿಕ್ಷಕರನ್ನು ಮಾಸ್ಟರ್ ಯೋಜನೆಯಿಂದ ಕೈಬಿಡಲಾಗಿದೆ. ಆದರೆ ಪ್ರಾಥಮಿಕ ವಿಭಾಗ ಶಿಕ್ಷಕರನ್ನು ಈ ನಿಟ್ಟಿನಲ್ಲಿ ಬಳಸಲಾಗುತ್ತಿದ್ದು ಹೆಚ್ಚುವರಿ ಚುರುಕಿನೊಂದಿಗೆ ಯೋಜನೆ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಗಳ ಸಭೆ ತುರ್ತು ನಡೆಸಿ ಚಟುವಟಿಕೆ ಚುರುಕುಗೊಳಿಸಬೇಕು ಎಂದವರು ಆದೇಶ ನೀಡಿದರು. ಕ್ರಿಸ್ಮಸ್, ಹೊಸವರ್ಷಾಚರಣೆ ಸಮಾರಂಭಗಳಲ್ಲಿ ಗರಿಷ್ಠ 100 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ರೀಡಾ ಪಂದ್ಯಾಟಗಳನ್ನು ನಡೆಸಲು ಅನುಮತಿಯಿಲ್ಲ ಎಂದವರು ನುಡಿದರು.
ಬೇಕಲ ಕೋಟೆಯ ಲೈಟ್ ಆ್ಯಂಡ್ ಸೌಂಡ್ ಶೋ ದಿನ ಬಿಟ್ಟು ದಿನ ಮಾತ್ರವಾಗಿದ್ದು , ಪ್ರವೇಶಾತಿ 100 ಮಂದಿಗೆ ಮಾತ್ರ ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಯರ್ಮ್ಯಾನ್ ಲಿಖಿತ ಪರೀಕ್ಷೆಗೆ ಅನುಮತಿ
ವಿದ್ಯುತ್ ಪರವಾನಗಿ ಮಂಡಳಿ ನಡೆಸುವ ವಯರ್ಮ್ಯಾನ್ ಲಿಖಿತ ಪರೀಕ್ಷೆ ಜ.9ರಂದು ನಿತ್ಯಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಿನೊಂದಿಗೆ ಪಾಲಿಸಿಕೊಂಡು ನಡೆಸಲು ಕೋವಿಡ್ ಕೋರ್ ಸಮಿತಿ ಸಭೆ ಅನುಮತಿ ನೀಡಿದೆ. ಕಣ್ಣೂರು ವಿವಿ ಅಂಚೆ ಶಿಕ್ಷಣ ವಿಭಾಗದ ಪರೀಕ್ಷೆಗಳು ಜಿಲ್ಲೆಯ 20 ಕೇಂದ್ರಗಳಲ್ಲಿ ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಿನೊಂದಿಗೆ ಪಾಲಿಸಿಕೊಂಡು ನಡೆಸಲಾಗುವುದು.
ಕುಂಬಳೆ ಕಣಿಪುರ ಕ್ಷೇತ್ರದ ಜಾತ್ರೆ , ಬೆಡಿ ಉತ್ಸವಗಳಿಗೆ ಅನುಮತಿಗಾಗಿ ಮನವಿ ಸಲ್ಲಿಸಲಾಗಿದ್ದು , ಈ ಸಂಬಂಧ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾ ಮಟ್ಟದ ಕೋರ್ ಸಮಿತಿ ಸಭೆ ನಿರ್ಧರಿಸಿದೆ. ಧಾರ್ಮಿಕ ಅನುಷ್ಠಾನ ಇತ್ಯಾದಿಗಳನ್ನು ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು, ಅನಿವಾರ್ಯ ಮಂದಿ ಮಾತ್ರ ಭಾಗವಹಿಸಿ ನಡೆಸಬಹುದು ಎಂದು ತಿಳಿಸಲಾಗಿದೆ.
ನಿಗದಿತ ಅವಧಿಯಲ್ಲಿ ಪೆಟ್ರೋಲ್ ಬಂಕ್ಗಳ ಚಟುವಟಿಕೆ
ಜಿಲ್ಲೆಯ ಪೆಟ್ರೋಲ್ ಬಂಕ್ಗಳು ರಾತ್ರಿ 9 ಗಂಟೆ ವರೆಗೆ ಮಾತ್ರ ಚಟುವಟಿಕೆ ನಡೆಸಬಹುದು ಎಂಬ ಆದೇಶವನ್ನು ನೀಡಿಲ್ಲ. ಪ್ರತಿ ಬಂಕ್ ಸಹ ಕೋವಿಡ್ ಕಟ್ಟುನಿಟ್ಟನ್ನು ಕಡ್ಡಾಯವಾಗಿ ಪಾಲಿಸಿ ಈ ಹಿಂದೆ ನಿಗದಿಪಡಿಸಿರುವ ಸಮಯದಲ್ಲಿ ಚಟುವಟಿಕೆ ನಡೆಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಿಎಫ್ಎಲ್ಟಿಸಿ ಸಜ್ಜುಗೊಳಿಸಿರುವ ಪಡನ್ನಕ್ಕಾಡು ಕೇಂದ್ರ ವಿವಿ ಚಟುವಟಿಕೆ ನಡೆಸುತ್ತಿದ್ದ ಹಳೆಯ ಕಟ್ಟಡವನ್ನು ಮಾಲೀಕರಿಗೆ ಮರಳಿ ಹಸ್ತಾಂತರಿಸಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ ವರದಿ ಸಲ್ಲಿಸಿದ್ದಾರೆ. ಇದಕ್ಕೆ ಬದಲಾಗಿ ನೀಲೇಶ್ವರ ತಾಲೂಕು ಅಸ್ಪತ್ರೆಯ ನೂತನ ಕಟ್ಟಡದ ಕೆಳಸ್ತರದ ಬ್ಲಾಕ್ ಸಜ್ಜುಗೊಳಿಸಲು ಜಿಲ್ಲಾ ವೈದ್ಯಾಧಿಕಾರಿ ಅವರಿಗೆ ಸಭೆ ಆದೇಶಿಸಿದೆ.
ಎಲ್ಲ ಸರಕಾರಿ ಸಿಬ್ಬಂದಿಗೆ 14 ದಿನಗಳಿಗೊಮ್ಮೆ ಆಂಟಿಜೆನ್ ಟೆಸ್ಟ್ ಕಡ್ಡಾಯ. ಎಲ್ಲ ಜಿಲ್ಲಾ ಮುಖ್ಯಸ್ಥರೂ ಈ ಸಂಬಂಧ ಆದೇಶವನ್ನುಕಡ್ಡಾಯವಾಗಿ ಪಾಲಿಸುವ ಸಂಬಂಧ ಜಿಲ್ಲಾ ವೈದ್ಯಾಧಿಕಾರಿ ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ , ಹೆಚ್ಚವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಶಂಸುದ್ದೀನ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಕೋರ್ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.