Friday, August 19, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕದಿಂದ ಕೋವಿಡ್ ಹೆಚ್ಚಳ: ಜಿಲ್ಲಾ ವೈದ್ಯಾಧಿಕಾರಿ

ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಂಪರ್ಕ ಮೂಲಕ ಅಧಿಕವಾಗಿ ಹರಡುತ್ತಿರುವುದಕ್ಕೆ ವಿವಾಹ, ಮರಣೋತ್ತರ ಕಾರ್ಯಕ್ರಮ ಇತ್ಯಾದಿಗಳು ಪ್ರಧಾನ ಕಾರಣವಾಗುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಗರಿಷ್ಠ ಎಚ್ಚರಿಕೆ ವಹಿಸಬೇಕೆಂದು ಅವರು ವಿನಂತಿಸಿದ್ದಾರೆ.
ಕಡ್ಡಾಯವಾಗಿ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿಕೊಂಡು ಯಾವುದೇ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ಕಟ್ಟುನಿಟ್ಟುಗಳನ್ನು ಪಾಲಿಸದಿದ್ದ ಪರಿಣಾಮ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಕ್ಲಸ್ಟರ್ ಗಳು ರಚನೆಗೊಂಡಿವೆ. ಚೆಂಗಳ ಪಂಚಾಯತ್ ನಲ್ಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ 46 ಮಂದಿಗೂ, ಮರಣೋತ್ತರ ಸಮಾರಂಭದಲ್ಲಿ ಭಾಗವಹಿಸಿದ್ದ 49 ಮಂದಿಗೂ, ಚೆಮ್ನಾಡು  ಪಂಚಾಯತ್ ನಲ್ಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ 21 ಮಂದಿಗೂ, ತೃಕ್ಕರಿಪುರದಲ್ಲಿ ನಡೆದಿದ್ದ ವಿವಾಹ ಸಮರಂಭದಲ್ಲಿ ಭಾಗಹಿಸಿದ್ದ ಸುಮಾರು 10 ಮಂದಿಗೂ ಸೋಂಕು ಖಚಿತವಾಗಿದೆ. ಇಂತಹ
ಕಾರಣಗಳಿಂದ ಜಿಲ್ಲೆಯಲ್ಲಿ ಇನ್ನಷ್ಟು ಕ್ಲಸ್ಟರ್ ಗಳು ರಚನೆಗೊಳ್ಳುವ ಸಾಧ್ಯತೆಗಳಿವೆ ಎಂದರು.
ಜಿಲ್ಲೆಯಲ್ಲಿ ಅತಿವೇಗದಲ್ಲಿ ಹರಡುತ್ತಿರುವ ಸೋಂಕಿನ ಪರಿಣಾಮ ಮರಣ ಸಂಖ್ಯೆಯೂ ಅಧಿಕಗೊಳ್ಳುವ ಭೀತಿಯಿದೆ ಎಂದು ಕಳವಳ
ವ್ಯಕ್ತಪಡಿಸಿದ ಅವರು, ಕಳೆದ 2 ವಾರಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 5 ಮಂದಿ ಕೋವಿಡ್ ರೋಗಬಾಧೆಯಿಂದ ಮೃತಪಟ್ಟಿದ್ದಾರೆ ಎಂಬುದನ್ನು ನೆನಪಿಸಿದರು.
ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಜನಸಂದಣಿ ಸೇರದಂತೆ ನೋಡಿಕೊಳ್ಳದೇ ಇದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು. ಆರೋಗ್ಯ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡಿ ಇಂತಹ ಸಮಾರಂಭಗಳನ್ನು ನಡೆಸಬೇಕು ಮತ್ತು ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತೀ ಅನಿವಾರ್ಯ ಎಂದವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!