Monday, August 8, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕು: ಇನ್ನಷ್ಟು ಚಿಕಿತ್ಸಾ ಕೇಂದ್ರ ತೆರೆಯಲು ಸಿದ್ಧತೆ

ಕಾಸರಗೋಡು: ಕೋವಿಡ್ ರೋಗಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕಾಸರಗೋಡು ಜಿಲ್ಲೆಯಲ್ಲಿ ಇನ್ನಷ್ಟು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಿತಿಗಿಂತ ಹೆಚ್ಚು ಮಂದಿಯನ್ನು ದಾಖಲಿಸಲಾಗಿದೆ. ಇನ್ನು ಅಲ್ಲಿ ದಾಖಲಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಇನ್ನಷ್ಟು ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಬೇಕಾಗಿ ಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸೇರಿ 20 ಸಂಸ್ಥೆಗಳನ್ನು ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಾಗಿ ಮಾರ್ಪಡಿಸಿವೆ. ರೋಗ ಗಂಭೀರ ಅಲ್ಲದವರನ್ನು ದಾಖಲಿಸಲು ಮಾತ್ರವೇ ಈ ತಾತ್ಕಾಲಿಕ ಕೇಂದ್ರಗಳನ್ನು ಬಳಸಲು ನಿರ್ಧರಿಸಲಾಗಿದೆ. ರೋಗಿಗೆ ರೋಗ ಉಲ್ಬಣಿಸಿದರೆ ಇಲ್ಲಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ , ಉಕ್ಕಿನಡ್ಕ ಮೆಡಿಕಲ್ ಕಾಲೇಜು ಮತ್ತು ಕಾಸರಗೋಡು ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರವೇ ರೋಗಿಗಳನ್ನು ದಾಖಲಿಸಲಾಗುತ್ತದೆ. ಆದರೆ ಈ ಮೂರು ಕೇಂದ್ರಗಳಲ್ಲಿ ಕೇವಲ 15 ವೆಂಟಿಲೇಟರ್ ಗಳು ಮಾತ್ರ ಇರುವುದಾಗಿದೆ. ಜಿಲ್ಲಾ ಆಸ್ಪತ್ರೆ , ಜನರಲ್ ಆಸ್ಪತ್ರೆಯಲ್ಲಿ ತಲಾ ಆರು ಹಾಗೂ ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ಮೂರು ವೆಂಟಿಲೇಟರ್ ಗಳು ಈಗ ಇವೆ. ಇದೇ ವೇಳೆ ಸುಸಜ್ಜಿತ ಮಾದರಿಯ ಐಸಿಯು ಘಟಕಗಳ ಅಗತ್ಯವೂ ಇದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಂಭೀರ ಸ್ಥಿತಿಯಲ್ಲಿ ರೋಗಿಗಳಿದ್ದರೆ ಸೂಕ್ತ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ.
ಸಂಪರ್ಕ ರೋಗಿಗಳ ಸಂಖ್ಯೆ ದಿನ ಕಳೆದಂತೆ ಏರಿಕೆಯಾಗುತ್ತಿರುವುದರಿಂದ ಶಾಲೆ, ಕಾಲೇಜು, ಹಾಸ್ಟೆಲ್ ಕಟ್ಟಡಗಳನ್ನು ಆಸ್ಪತ್ರೆಗಳಾಗಿ ಬದಲಾಯಿಸಲಾಗಿದೆ. ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಸೌಲಭ್ಯದ ಅಭಾವವಿರಲಿಲ್ಲ. ಆದರೆ ದಿನಗಳು ಕಳೆದಂತೆ ಸೌಕರ್ಯ ಸಾಕಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರೋಗ ಬಾಧಿತರಿದ್ದಲ್ಲಿ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಿರುವ ಸೌಲಭ್ಯ ಏರ್ಪಡಿಸಬೇಕಾಗಿ ಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss