ಕಾಸರಗೋಡು: ಅನ್ಯರಾಜ್ಯ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ಶ್ರಮಿಕ್ ರೈಲು ಕೊನೆಯ ಗಳಿಗೆಯಲ್ಲಿ ರದ್ದಾದ ಬೆನ್ನಲ್ಲೇ ತಮ್ಮ ಪ್ರಯಾಣದ ಬಗ್ಗೆ ಆತಂಕಗೊಂಡ ಉತ್ತರಪ್ರದೇಶದ ನಿವಾಸಿಗಳು, ಕಾಸರಗೋಡು ಪುರಸಭೆ ಕಚೇರಿ ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳ ಮುಂದೆ ಪ್ರತಿಭಟನೆ ನಡೆಸಿದರು.
ಅಲ್ಲದೆ ಹೆದ್ದಾರಿ ನಿರ್ಮಾಣ ಕಾರ್ಮಿಕರಾದ ಅನ್ಯರಾಜ್ಯದವರು ತಮ್ಮ ವಾಪಸಾತಿಗೆ ಹೇಗಾದರೂ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಮನೆಯ ಮುಂದೆ ಬಂದು ದಿಗ್ಬಂಧನ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಶಾಸಕರ ಮನೆ ಮುಂದೆ ಅನ್ಯರಾಜ್ಯ ಕಾರ್ಮಿಕರಾದ ಮುನ್ನೂರರಷ್ಟು ಜನರು ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಸಂಧಾನ ನಡೆಸಿ ವಿಷಯವನ್ನು ಇತ್ಯರ್ಥಪಡಿಸಿ ಗುಂಪು ಚದುರಿಸಿದರು. ಇಂತಹ ವಿಷಯಗಳಲ್ಲಿ ಜಿಲ್ಲಾಡಳಿತವು ಸರಿಯಾದ ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಉಂಟಾದ ಗೊಂದಲ ಇದಾಗಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು. ಶನಿವಾರ ರಾತ್ರಿ ಹೊರಡಬೇಕಿದ್ದ ವಿಶೇಷ ರೈಲು ಇದ್ದಕ್ಕಿದ್ದಂತೆ ರದ್ದುಗೊಂಡಿದ್ದರ ತರುವಾಯ ಇಂತಹ ನಾಟಕೀಯ ಬೆಳವಣಿಗೆ ನಡೆಯಿತು.
ಕಾಸರಗೋಡು ಪೋರ್ಟ್ ರಸ್ತೆ ಮತ್ತು ವಿದ್ಯಾನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ಉತ್ತರ ಪ್ರದೇಶದ ನಿವಾಸಿಗಳು ರೈಲು ರದ್ದುಗೊಂಡ ಬಳಿಕ ತಮ್ಮ ವಸತಿಗೇ ಮರಳುವರೆಂದು ಎಲ್ಲರೂ ಎಣಿಸಿರುವಂತೆ ವಸತಿಗೆ ಮರಳದೆ ಹಠಾತ್ ಪ್ರತಿಭಟನೆ ನಡೆಸಿ ಗೊಂದಲಕ್ಕೆ ಕಾರಣರಾದರು.
ಈ ವಿಶೇಷ ಶ್ರಮಿಕ್ ರೈಲು ಶನಿವಾರ ರಾತ್ರಿ 7 ಗಂಟೆಗೆ ಉತ್ತರಪ್ರದೇಶಕ್ಕೆ ತೆರಳಬೇಕಿತ್ತು. ಇದೇ ವೇಳೆ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ರಕ್ಷಣಾ ಉಸ್ತುವಾರಿ ವಹಿಸಿರುವ ಹಿರಿಯ ಐಎಎಸ್ ಅಧಿಕಾರಿ ಬಿಶ್ವನಾಥ ಸಿನ್ಹಾ ಅವರು ಭಾನುವಾರ ರಾತ್ರಿ ರೈಲು ಸೇವೆಯನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಎನ್.ಎ.ನೆಲ್ಲಿಕುನ್ನು ಬಳಿಕ ತಿಳಿಸಿದರು. ಇನ್ನೊಂದೆಡೆ ಕೇರಳ ರಾಜ್ಯ ಸರ್ಕಾರದ ನಿರ್ಧಾರದಂತೆ ರೈಲು ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ.