ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ತಪಾಸಣೆ ಪುನರಾರಂಭಿಸಲು ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ನಿರ್ಧಾರ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ ಗಡಿ ಪ್ರದೇಶಗಳಲ್ಲಿ ತಪಾಸಣೆ ಪುನರಾರಂಭಿಸಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ಆಯೋಜಿಸಲಾದ ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕೇರಳ ಹೈಕೋರ್ಟ್ ತೀರ್ಪಿನ ಪ್ರಕಾರ ಕೋವಿಡ್ ತಪಾಸಣೆಯಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗದಿರುವ ಹಿನ್ನೆಲೆಯಲ್ಲಿ ಕೋವಿಡ್ ವ್ಯಾಪನೆ ತಡೆಯುವ ಉದ್ದೇಶದೊಂದಿಗೆ ತಪಾಸಣೆ ನಡೆಸಲಾಗುವುದು. ಆದರೆ ಗಡಿಗಳಲ್ಲಿ ಯಾರನ್ನೂ ತಡೆಯುವುದಿಲ್ಲ. ಯಾವುದೇ ಬ್ಯಾರಿಕೇಡ್‌ಗಳು ಇರಿಸಲಾಗುವುದಿಲ್ಲ‌. ಪಾಸ್ ವ್ಯವಸ್ಥೆ ಏರ್ಪಡಿಸಲಾಗುವುದಿಲ್ಲ. ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆಗೆ ಬರುವವರು ಕೋವಿಡ್-19 ಜಾಗ್ರತಾ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಇದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಜಿಲ್ಲಾ ಗಡಿಗಳಲ್ಲಿ ತಪಾಸಣೆ ಮುಂದುವರಿಸಲು ತೀರ್ಮಾನಿಸಲಾಗಿದೆ.
ತಲಪ್ಪಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು, ಕಂದಾಯ ಮತ್ತು ಆರೋಗ್ಯ ಅಧಿಕಾರಿಗಳಿಂದ ಪರಿಶೀಲನೆ ನಡೆಯಲಿದೆ. ಜಿಲ್ಲೆಯ ಎಲ್ಲ 16 ಗಡಿಗಳಲ್ಲಿ ತಪಾಸಣೆ ಪುನರಾರಂಭಗೊಳ್ಳಲಿದೆ. ಪೊಲೀಸರ ಜತೆಗೆ, ಅರಣ್ಯ , ಅಗ್ನಿಶಾಮಕ ದಳ, ಅಬಕಾರಿ ಇಲಾಖೆ ಸಮವಸ್ತ್ರಧಾರಿ ಅಧಿಕಾರಿಗಳು ಈ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಇಡುಕ್ಕಿ , ವಯನಾಡು ಮತ್ತು ತಿರುವನಂತಪುರ ಜಿಲ್ಲೆಯ ಗಡಿಗಳನ್ನು ಇನ್ನೂ ತೆರೆಯಲಾಗಿಲ್ಲ. ಆದರೆ ಕಾಸರ‌ಗೋಡು ಜಿಲ್ಲೆಯಲ್ಲಿ ಹೈಕೋರ್ಟ್ ಆದೇಶದಂತೆ ಕೋವಿಡ್ ರೋಗ ಹರಡುವಿಕೆ ನಿಯಂತ್ರಿಸಲು ಗಡಿ ದಾಟಿ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು.
ವಾರದ ಎಲ್ಲ ದಿನಗಳಲ್ಲಿ 24 ಗಂಟೆ ಕಾಲವೂ ತಪಾಸಣೆ ನಡೆಸಲಾಗುವುದು.
ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಹೆಚ್ಚಿಸಲಾಗುವುದು. ಈಗ ಜಿಲ್ಲೆಯಲ್ಲಿ ರೋಗ ಲಕ್ಷಣವಿರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿದಿನ 1700 ರಿಂದ 2 ಸಾವಿರ ಮಂದಿಯ ತಪಾಸಣೆ ನಡೆಸಲಾಗುತ್ತಿದೆ. ಮುಂದೆ 3 ಸಾವಿರ ಮಂದಿಯನ್ನು ತಪಾಸಣೆಗೊಳಪಡಿಸಲು ರಾಜ್ಯ ಸರಕಾರವು ಆದೇಶ ನೀಡಿದೆ. ಈ ನಿಟ್ಟಿನಲ್ಲಿ ದಂತ ವೈದ್ಯರನ್ನು , ದಾದಿಯರನ್ನು ಗಡಿ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯದಲ್ಲಿ ನೇಮಿಸಿ ತಪಾಸಣೆ ನಡೆಸಲು ಕೊರೋನಾ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ.
ಕಾಞಂಗಾಡಿನ ಆರ್ಟ್ ಗ್ಯಾಲರಿ ತೆರೆದು ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ. ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಆರ್ಟ್ ಗ್ಯಾಲರಿ ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ನುಡಿದರು. ಒಟ್ಟು ಸೀಟುಗಳಲ್ಲಿ ಶೇ. 50 ಸೀಟುಗಳನ್ನು ಬಳಸಿ, ಮಾನದಂಡ ಪಾಲಿಸಿಕೊಂಡು ಹೌಸ್ ಬೋಟುಗಳ ಸಂಚಾರ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆದರೆ 20 ಮಂದಿಗಿಂತ ಅಧಿಕ ಜನ ಸೇರಕೂಡದು ಎಂದು ತಿಳಿಸಲಾಗಿದೆ.
ಕಾಸರಗೋಡು ನಗರಸಭೆ ಮೈದಾನವನ್ನು ವ್ಯಾಯಾಮಕ್ಕಾಗಿ ಬಳಸಬಹುದು. ಏಕಕಾಲಕ್ಕೆ 20 ಮಂದಿ ಮಾತ್ರ ಪ್ರವೇಶಾತಿ ಇರುವುದು. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಫುಟ್ ಬಾಲ್ ಪಂದ್ಯಕ್ಕೆ ಅನುಮತಿ ಇರುವುದಿಲ್ಲ. ಇತರ ಕಡೆಗಳಲ್ಲಿ ಗರಿಷ್ಠ 20 ಮಂದಿ ಭಾಗವಹಿಸಲು ಅನುಮತಿ ನೀಡಲಾಗುವುದು.
ತೀವ್ರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ಅಗತ್ಯದ ಮೂಲಭೂತ ಸೌಲಭ್ಯಗಳನ್ನು ಏರ್ಪಡಿಸಿ ಟಾಟಾ ಕೋವಿಡ್ ಆಸ್ಪತ್ರೆಯನ್ನು ತೆರೆದು ಕಾರ್ಯಾಚರಿಸಲು ಬೇಕಾದ ಕ್ರಮಗಳನ್ನು ಚುರುಕುಗೊಳಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯ ರೋಗಿಗಳಿಗೆ ವೆಂಟಿಲೇಟರ್ ಸೌಲಭ್ಯ
ಒದಗಿಸಲಾಗುತ್ತದೆ. ಕೋವಿಡ್ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ನುಡಿದರು.
ಜಿಲ್ಲಾ ಮಟ್ಟದ ಕೊರೋನಾ ಸಮಿತಿ ಸಭೆಯಲ್ಲಿ ಮಾಸ್ಟರ್ ಯೋಜನೆಯ ಲಾಂಛನ ಬಿಡುಗಡೆಗೊಂಡಿದೆ. ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಬಿಡುಗಡೆಗೊಳಿಸಿದರು. ಲಾಂಛನ ಸಿದ್ಧಪಡಿಸಿದ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ
ಶಿಕ್ಷಕ ಸುಜಿತ್ ಬಿ. ಅವರಿಗೆ ಅರ್ಹತಾಪತ್ರ, ನಗದು ಬಹುಮಾನ ವಿತರಿಸಲಾಯಿತು. ಇತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ಚಾಲಕರಿಗೆ ಮತ್ತು ಸಿಬ್ಬಂದಿಗಳಿಗೆ ವಿತರಣೆ ನಡೆಸುವ ಐ.ಇ.ಸಿ. ಸಂಚಲನ ಸಮಿತಿ ಸಿದ್ಧಪಡಿಸಿರುವ ಜನಜಾಗೃತಿ ಕರಪತ್ರದ ವಿತರಣಾ ಉದ್ಘಾಟನೆ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಬಿಡುಗಡೆಗೊಳಿಸಿದರು. ಐ.ಇ.ಸಿ. ಸಂಚಲನ ಸಮಿತಿ ಸಂಚಾಲಕ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರು ಕರಪತ್ರ ಪಡೆದುಕೊಂಡರು.
ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ , ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಶಂಸುದ್ದೀನ್, ಹಣಕಾಸು ಅಧಿಕಾರಿ ಕೆ.ಸತೀಶನ್ ಅಲ್ಲದೆ ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss