Thursday, August 11, 2022

Latest Posts

ಕಾಸರಗೋಡು ಜಿಲ್ಲೆಯ 17 ಗ್ರಾಪಂಗಳ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲು

ಕಾಸರಗೋಡು: ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ ಪಂಚಾಯತ್ ಗಳ ಅಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಘೋಷಿಸಲಾಗಿದೆ. ಅದರಂತೆ ಕಾಸರಗೋಡು ಜಿಲ್ಲೆಯ 17 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆಯ ಬಳಿಕ ಮಹಿಳೆಯರು ಅಧ್ಯಕ್ಷರಾಗಲಿದ್ದಾರೆ. ಮಾತ್ರವಲ್ಲದೆ ಈ ಬಾರಿ ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಕೂಡ ಮಹಿಳೆಗೆ ನೀಡಲಾಗಿದೆ.
ಮುಳಿಯಾರು, ದೇಲಂಪಾಡಿ, ಬೇಡಡ್ಕ , ಮಂಜೇಶ್ವರ, ವರ್ಕಾಡಿ, ಮೀಂಜ, ಮಂಗಲ್ಪಾಡಿ, ಕುಂಬಳೆ, ಮೊಗ್ರಾಲ್ ಪುತ್ತೂರು, ಚೆಮ್ನಾಡು, ಉದುಮ, ಅಜಾನೂರು, ಮಡಿಕೈ , ಕೋಡೋಂ ಬೆಳ್ಳೂರು, ಪನತ್ತಡಿ, ಚೆರ್ವತ್ತೂರು, ಪಿಲಿಕ್ಕೋಡು ಗ್ರಾ. ಪಂ. ಅಧ್ಯಕ್ಷ ಹುದ್ದೆಯನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಬದಿಯಡ್ಕ ಗ್ರಾ. ಪಂ. ಅಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ಪೈವಳಿಕೆ ಮತ್ತು ಕುತ್ತಿಕ್ಕೋಲು ಪಂಚಾಯತ್ ಗಳ ಅಧ್ಯಕ್ಷ ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ವಹಿಸಲಾಗಿದೆ.
ಪ್ರಸ್ತುತ ಕೊನೆಗೊಳ್ಳುವ ಸ್ಥಳೀಯಾಡಳಿತ ಸಂಸ್ಥೆಗಳಿಗೆ 2015ರಲ್ಲಿ ನಡೆದ ಚುನಾವಣೆಯಲ್ಲಿ ಪಳ್ಳಿಕೆರೆ, ಮಧೂರು, ತೃಕ್ಕರೀಪುರ, ಪೈವಳಿಕೆ, ಪುಲ್ಲೂರು ಪೆರಿಯ, ವೆಸ್ಟ್ ಎಳೇರಿ, ಕಿನಾನೂರು ಕರಿಂದಳ, ಎಣ್ಮಕಜೆ, ಈಸ್ಟ್ ಎಳೇರಿ, ಕುತ್ತಿಕ್ಕೋಲು, ಕಯ್ಯೂರು ಚೀಮೇನಿ, ಪಡನ್ನ , ಪುತ್ತಿಗೆ, ಕಾರಡ್ಕ, ಕಳ್ಳಾರು, ಕುಂಬ್ಡಾಜೆ, ಬೆಳ್ಳೂರು ಇವುಗಳು ಮಹಿಳಾ ಅಧ್ಯಕ್ಷ ಸ್ಥಾನ ಮೀಸಲಾತಿ ಪಂಚಾಯತ್ ಗಳಾಗಿವೆ. ಈ ಪೈಕಿ ಬಳಾಲು ಪಂಚಾಯತ್ ನಲ್ಲಿ ಪರಿಶಿಷ್ಟ ಪಂಗಡದ ಮಹಿಳೆ ಮತ್ತು ಕುಂಬಳೆಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ಪುರುಷ ಮೀಸಲಾತಿಯಂತೆ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದಾರೆ.
ಜಿಲ್ಲೆಯ ಒಟ್ಟು 38 ಗ್ರಾಮ ಪಂಚಾಯತ್ ಗಳಲ್ಲಿ 664 ವಾರ್ಡ್ ಗಳಿವೆ. ಆರು ಬ್ಲಾಕ್ ಪಂಚಾಯತ್ ಗಳಲ್ಲಿ 83 ವಾರ್ಡ್ ಗಳಿವೆ. ಕಾಸರಗೋಡು, ಕಾಞಂಗಾಡು, ನೀಲೇಶ್ವರ ನಗರಸಭೆಗಳಲ್ಲಾಗಿ 113 ವಾರ್ಡ್ ಗಳಿವೆ. ಜಿಲ್ಲಾ ಪಂಚಾಯತ್ ನಲ್ಲಿ 17 ವಾರ್ಡ್ ಗಳಿವೆ.
ತ್ರಿಸ್ತರ ಪಂಚಾಯತ್ ಚುನಾವಣೆಗೆ ಮುನ್ನ ಜಿಲ್ಲೆಯಲ್ಲಿ ಕಾಯ್ದಿರಿಸಿದ ವಾರ್ಡ್ ಗಳ ಡ್ರಾ ಅಕ್ಟೋಬರ್‍ನಲ್ಲಿ ಪೂರ್ಣಗೊಂಡಿತ್ತು. ಜಿಲ್ಲಾ ಪಂಚಾಯತ್ ನ ಸಿವಿಲ್ ಸ್ಟೇಷನ್ ವಿಭಾಗವನ್ನು ಮತ್ತೆ ಮಹಿಳೆಯರಿಗಾಗಿ ಕಾಯ್ದಿರಿಸಲಾಗಿದೆ. ಜಿಲ್ಲೆಯ ವರ್ಕಾಡಿ, ಎಡನೀರು, ಬೇಡಗಂ, ಕರಿಂದಳ, ಮಡಿಕೈ , ಪೆರಿಯ, ಉದುಮ, ಸಿವಿಲ್ ಸ್ಟೇಷನ್, ಕುಂಬಳೆ ವಿಭಾಗಗಳಲ್ಲಿ ಮಹಿಳೆಯರು ಸ್ಪರ್ಧಿಸಲಿದ್ದಾರೆ. ಪಿಲಿಕ್ಕೋಡು ವಿಭಾಗವನ್ನು ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿ ಮತ್ತು ಪುತ್ತಿಗೆ ವಿಭಾಗವನ್ನು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss