ಕಾಸರಗೋಡು: ಹಲಸಿನ ಹಣ್ಣು ತಲೆ ಮೇಲೆ ಬಿದ್ದು , ಬೆನ್ನು ಮೂಳೆ ಹಾನಿಗೊಳಗಾಗಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಆವರಿಗೆ ಕೊರೋನಾ ಸೋಂಕು ಇರುವುದಾಗಿ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಆಟೋ ರಿಕ್ಷಾ ಚಾಲಕನೊಬ್ಬನಿಗೆ ಹಲಸಿನ ಹಣ್ಣು ತಲೆ ಮೇಲೆ ಬಿದ್ದಿತ್ತು. ತಲೆಗೆ ಗಾಯವಾಗದಿದ್ದರೂ ಬೆನ್ನು ಮೂಳೆಗೆ ಹಾನಿಯಾಗಿತ್ತು. ಈ ನಿಮಿತ್ತ ಅವರು ಆಸ್ಪತ್ರೆಗೆ ದಾಖಲಾದರು. ನಡೆದ ಘಟನೆಯನ್ನೆಲ್ಲ ವೈದ್ಯರಿಗೆ ವಿವರಿಸಿದರು. ದುರಾದೃಷ್ಟವೇ ಇರಬೇಕು, ಅವರ ಬೆನ್ನುಬಿದ್ದದ್ದು ಹಲಸಲ್ಲ , ಕೊರೋನಾ ವೈರಸ್. ಈ ಸೋಂಕು ಹೇಗೆ ತಗುಲಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ವೈದ್ಯಾಧಿಕಾರಿಗಳು
ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಬೇಲೂರಿನ ನಿವಾಸಿಯಾದ ಅವರ ಬೆನ್ನುಮೂಳೆಗೆ ಗಾಯವಾಗಿದ್ದು , ಕೈ ಕಾಲುಗಳು ದುರ್ಬಲಗೊಂಡಿವೆ.
ಆದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಅಗತ್ಯವಾಗಿತ್ತು. ಇದೀಗ ಯಾವುದೇ ತುರ್ತು ಶಸ್ತ್ರಚಿಕಿತ್ಸೆಗೊಳಗಾಗುವ ವ್ಯಕ್ತಿಯನ್ನು ಮೊದಲು ಕೋವಿಡ್ ಪರೀಕ್ಷೆಗೊಳಪಡಿಸುವುದು ವೈದ್ಯಕೀಯ ನಿಯಮಾವಳಿಯಾಗಿದೆ. ಆದ್ದರಿಂದ ಆ ವ್ಯಕ್ತಿಯನ್ನು ಪರೀಕ್ಷಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕಣ್ಣೂರು ಪೆರಿಯಾರಂ ಮೆಡಿಕಲ್ ಕಾಲೇಜಿನ ಮುಖ್ಯ ಅಧಿಕಾರಿ ಡಾ.ಕೆ.ಸುದೀಪ್ ದೃಢಪಡಿಸಿದ್ದಾರೆ.
ಆಟೋ ಚಾಲಕನಿಗೆ ಇತ್ತೀಚೆಗಿನ ಪ್ರಯಾಣದ ಇತಿಹಾಸ ಅಥವಾ ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕವಿಲ್ಲ. ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರಿಂದ ಅವರಿಗೆ ಸೋಂಕು ಪತ್ತೆಯಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಒಮ್ಮೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿಂದ ಅವರಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಇದೆಲ್ಲವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿ ಹೇಳಿದರು.
ಅವರ ಕುಟುಂಬದವರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಅಲ್ಲದೆ ಅವರ ಪ್ರಾಥಮಿಕ ಸಂಪರ್ಕಗಳನ್ನು ಕಂಡುಹಿಡಿಯುವ ಕಾರ್ಯ ಮುಂದುವರಿದಿದೆ.