ಮಂಗಳೂರು: ಕಾಸರಗೋಡು ಮತ್ತು ದಕ್ಷಿಣ ಕನ್ನಡ ನಡುವೆ ತುರ್ತು ಕಾರಣಗಳಿಂದ ತೆರಳುವವರಿಗೆ ಅವಕಾಶ ಕಲ್ಪಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಹೊರತುಪಡಿಸಿ ಬೇರಾವ ರಾಜ್ಯದಲ್ಲಿ ಕಡ್ಡಾಯ ಕ್ವಾರಂಟೈನ್ ಇಲ್ಲದೇ ಇರುವುದರಿಂದ ದಿನನಿತ್ಯ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಯಾಣಿಸುವ ಸರಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳು, ವೈದ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮತ್ತು ಗುರುತು ಚೀಟಿ ಹೊಂದಿದ ನೌಕರರಿಗೆ ಅವರ ಗುರುತು ಚೀಟಿಯ ನೆಲೆಯಲ್ಲಿ ತಲಪಾಡಿ ಗಡಿಯಲ್ಲಿ ಪ್ರವೇಶಾವಕಾಶ ಕಲ್ಪಿಸಲು ತಲಪಾಡಿ ಗಡಿ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವ ಕೋಟ ಮನವಿ ಮಾಡಿದ್ದಾರೆ.