Monday, August 8, 2022

Latest Posts

ಕಾಸರಗೋಡು| ಪಾಲಕ್ಕಾಡು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು: ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ಕಾಸರಗೋಡು: ಭಾನುವಾರದ ಕೋವಿಡ್ ಪರೀಕ್ಷೆಯಲ್ಲಿ ಕೇರಳ ರಾಜ್ಯದ ಇತರ ಜಿಲ್ಲೆಗಳಿಗಿಂತ ಹೆಚ್ಚು ಮಂದಿ ಪಾಲಕ್ಕಾಡು ಜಿಲ್ಲೆಯಲ್ಲಿ ರೋಗ ದೃಢಪಟ್ಟ ಹಿನ್ನೆಲೆಯಲ್ಲಿ ಸೋಮವಾರದಿಂದ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೇ 31 ರ ವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಪಾಲಕ್ಕಾಡು ಜಿಲ್ಲಾಡಳಿತ ತಿಳಿಸಿದೆ.

ಭಾನುವಾರ ಪಾಲಕ್ಕಾಡು ಜಿಲ್ಲೆಯೊಂದರಲ್ಲೇ 19 ರೋಗಿಗಳ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಕಲಾಗಿರುವ ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಕ್ಕಾಡು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಭಾನುವಾರ ರಂಜಾನ್ ಆಗಿದ್ದರಿಂದ ಸೋಮವಾರದಿಂದ ನಿಷೇಧಾಜ್ಞೆ ಜಾರಿಗೆ ಬಂದಿದೆ. ಇದೇ ವೇಳೆ ಪಾಲಕ್ಕಾಡು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ವನಿಗದಿಯಂತೆ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಭಾನುವಾರ ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆ 52 ಆಗಿ ವರದಿಯಾಗಿತ್ತು. ಪಾಲಕ್ಕಾಡು ವಾಳಯಾರ್ ಗಡಿಯಿಂದ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಅಲ್ಲಿ 12 ಮಂದಿ ಸೋಂಕಿತರು ಪತ್ತೆಯಾಗಿರುವರು. ಈ ಪೈಕಿ ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ಮೂಲದವರೂ ಇರುವರು. ಇಬ್ಬರು ವಿದೇಶದಿಂದ ಬಂದವರು. ಜಿಲ್ಲೆಯ ಮೂವರು ಆರೋಗ್ಯ ಕಾರ್ಯಕರ್ತರಲ್ಲೂ ಸೋಂಕು ಪತ್ತೆಯಾಗಿದೆ. ಪ್ರಸ್ತುತ ಜಿಲ್ಲೆಯ 45 ಮಂದಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಳಯಾರ್ ಗಡಿಯಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳೂ ಸೋಂಕಿತರ ಪಟ್ಟಿಯಲ್ಲಿದ್ದಾರೆ. ಪಾಲಕ್ಕಾಡು ಜಿಲ್ಲಾ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳು, ದಾದಿಯರು ಮತ್ತು ವಾಳಯಾರ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ 22 ವರ್ಷದ ಆರೋಗ್ಯ ಕಾರ್ಯಕರ್ತರು ಈ ಪಟ್ಟಿಯಲ್ಲಿದ್ದಾರೆ. 11 ವರ್ಷದ ಬಾಲಕಿಯಲ್ಲೂ ಸೋಂಕು ಪತ್ತೆಯಾಗಿದೆ. ಈ ಬಾಲಕಿ ಗುಜರಾತ್ ಮೂಲದವರಾಗಿದ್ದಾರೆ. ಒಟ್ಟಿನಲ್ಲಿ ಕೇರಳದ ಪಾಲಕ್ಕಾಡು ಜಿಲ್ಲೆಯಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss