ಕಾಸರಗೋಡು: ಪಾಸ್ ಇಲ್ಲದೆ ಮುಂಬೈಯಿಂದ ಬಂದ ವ್ಯಕ್ತಿಯನ್ನು ತನ್ನ ಕಾರಿನಲ್ಲಿ ಕೇರಳಕ್ಕೆ ತಲುಪಿಸಿದ ಕಾಂಗ್ರೆಸ್ ನೇತಾರ, ಗ್ರಾಮ ಪಂಚಾಯತ್ ಸದಸ್ಯನ ವಿರುದ್ದ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮ ಪಂಚಾಯತ್ ಸದಸ್ಯ , ಕಾಂಗ್ರೆಸ್ ನೇತಾರನಾದ ಕೊರಗಪ್ಪ ರೈ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮುಂಬೈಯಿಂದ ಆಗಮಿಸಿದ ದೇಲಂಪಾಡಿ ಸಮೀಪದ ಮಯ್ಯಳ ನಿವಾಸಿ ಜಗನ್ನಾಥ ರೈ ಎಂಬವರನ್ನು ಪುತ್ತೂರಿನಿಂದ ತನ್ನ ಕಾರಿನಲ್ಲಿ ಕೊರಗಪ್ಪ ರೈ ಕರೆ ತಂದಿದ್ದರು. ಪಾಸ್ ಸಹಿತ ಯಾವುದೇ ದಾಖಲೆ ಇಲ್ಲದೆ ಜಗನ್ನಾಥ ರೈ ಅವರನ್ನು ಊರಿಗೆ ಕರೆದುಕೊಂಡು ಬಂದ ಬಗ್ಗೆ ಮಾಹಿತಿ ಬಹಿರಂಗಗೊಂಡು ರಾಜಕೀಯ ವಿವಾದ ಉಂಟಾಗಿತ್ತು.
ಕೇಸು ದಾಖಲಿಸಿದ ನಂತರ ಕೊರಗಪ್ಪ ರೈ ಹಾಗೂ ಜಗನ್ನಾಥ ರೈ (ಇಬ್ಬರನ್ನೂ) ಯರನ್ನು ಸರಕಾರದ ಕಾರೆಂಟೈನ್ ಗೆ ಕಳುಹಿಸಲಾಯಿತು.
ಕಳೆದ ವಾರ ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಆಕೆಯ ಪತಿ ಸಿಪಿಎಂ ನೇತಾರ ಅಬ್ದುಲ್ ರಜಾಕ್ ಚಿಪ್ಪಾರು ಸೇರಿ ಮುಂಬೈಯಿಂದ ಆಗಮಿಸಿದ ಸಂಬಂಧಿಕನನ್ನು ರಹಸ್ಯವಾಗಿ ಮನೆಗೆ ಕರೆದುಕೊಂಡು ಬಂದ ಪ್ರಕರಣ ನಡೆದಿದ್ದು, ವಿವಾದವಾಗುತ್ತಿದ್ದಂತೆ ಪೊಲೀಸರು ಕಠಿಣ ಕೇಸು ದಾಖಲಿಸಿದ್ದರು. ಇದೇ ವೇಳೆ ಕಾಸರಗೋಡು ಜಿಲ್ಲೆಯ ಕೆಲವು ಸಿಪಿಎಂ ಮತ್ತು ಕಾಂಗ್ರೆಸ್ ಮುಖಂಡರು ಲಾಕ್ ಡೌನ್ ನ ಎಲ್ಲಾ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗುತ್ತಿದೆ.