ಹೊಸದಿಗಂತ ವರದಿ,ಕಾಸರಗೋಡು:
ಜಿಲ್ಲೆಯ ಪೆರಿಯ ಕಲ್ಯೋಟ್ನ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ಲಾಲ್ ಮತ್ತು ಕೃಪೇಶ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡವು ಸಿಪಿಎಂ ಮುಖಂಡ ಹಾಗೂ ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಅವರಿಂದ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಕೊಲೆ ಪ್ರಕರಣದಲ್ಲಿ ಮಣಿಕಂಠನ್ 14ನೇ ಆರೋಪಿ. ಸಿಪಿಎಂ ಉದುಮ ಕಚೇರಿಗೂ ತೆರಳಿದ ಸಿಬಿಐ ತಂಡವು ಮಾಹಿತಿ ಕಲೆ ಹಾಕಿದೆ.
ಕಚೇರಿ ಕಾರ್ಯದರ್ಶಿಯ ಹೇಳಿಕೆ ದಾಖಲಿಸಿಕೊಂಡ ಸಿಬಿಐ ಡಿವೈಎಸ್ಪಿ ಅನಂತಕೃಷ್ಣನ್ ನೇತೃತ್ವದ ಅಧಿಕಾರಿಗಳ ತಂಡವು ಆರೋಪಿಗಳು ಕಚೇರಿಯೊಳಗೆ ಕೊಠಡಿಯಲ್ಲಿ ಆಶ್ರಯ ಪಡೆದಿರುವುದನ್ನು ದಾಖಲಿಸಿಕೊಂಡಿದೆ. ಆರೋಪಿಗಳು ರಕ್ತ ಸಿಕ್ತಗೊಂಡಿದ್ದ ಬಟ್ಟೆಗಳನ್ನು ವಳುತ್ತೋಳಿಯಲ್ಲಿ ಬೆಂಕಿ ಹಚ್ಚಿ ನಾಶಗೊಳಿಸಿದ ಸ್ಥಳ, ವಾಹನ, ಆಯುಧ ಬಿಟ್ಟು ಹೋದ ಪ್ರದೇಶಕ್ಕೂ ತೆರಳಿ ಮಾಹಿತಿ ಸಂಗ್ರಹಿಸಿದೆ. ಕೃಪೇಶ್, ಶರತ್ಲಾಲ್ ಹೆತ್ತವರನ್ನೂ ಭೇಟಿಯಾಗಿ ಮಾಹಿತಿ ಕಲೆ ಹಾಕಿದೆ.
2019ನೇ ಫೆ.17ರಂದು ರಾತ್ರಿ ಈ ಇಬ್ಬರ ಕೊಲೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಸಿಪಿಎಂ ಮಾಜಿ ಏರಿಯಾ ಕಾರ್ಯದರ್ಶಿ ಪೀತಾಂಬರನ್ ಸಹಿತ 14 ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಇವರಲ್ಲಿ 11 ಮಂದಿ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೃತ್ಯ ನಡೆಸಿದ ನಂತರ ನಾಲ್ಕು ಮಂದಿ ಸಿಪಿಎಂ ಏರಿಯಾ ಕಚೇರಿಯಲ್ಲಿ ಹಾಗೂ ಇತರರು ಸನಿಹದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಬಗ್ಗೆ ಕ್ರೈಮ್ ಬ್ರಾಂಚ್ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು.