ಕಾಸರಗೋಡು: ನಿಗದಿತ ದಿನಾಂಕದ ಬಳಿಕವೂ ತೆರಿಗೆ ಪಾವತಿಸದಿರುವುದರಿಂದ ಜಿಎಸ್ಟಿ ಇಲಾಖೆಯು ಕಾಸರಗೋಡು ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆಯ ಅಧಿಕೃತರಿಗೆ ಎರಡನೇ ನೋಟೀಸ್ ಜಾರಿ ಮಾಡಿದೆ. ಫ್ಯಾಷನ್ ಗೋಲ್ಡ್ ಸಂಸ್ಥೆಯ ಕಾಸರಗೋಡು ಮತ್ತು ಚೆರ್ವತ್ತೂರು ಶಾಖೆಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಫ್ಯಾಷನ್ ಗೋಲ್ಡ್ ನ ಎರಡು ಶಾಖೆಗಳಲ್ಲಾಗಿ 1.41 ಕೋಟಿ ರೂಪಾಯಿ ವಂಚಿಸಲಾಗಿದೆ. ಹೊಸ ನೋಟೀಸ್ನಲ್ಲಿ ಶೇಕಡಾ 25 ರಷ್ಟು ದಂಡ ಮತ್ತು ಬಡ್ಡಿಯೊಂದಿಗೆ 2.38 ಕೋಟಿ ರೂ. ಪಾವತಿಸಲು ಸೂಚಿಸಲಾಗಿದೆ.
ಇದೇ ವೇಳೆ ಹೂಡಿಕೆ ವಂಚನೆಗೆ ಸಂಬಂಧಿಸಿದಂತೆ ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆಯ ನಿರ್ದೇಶಕರ ವಿರುದ್ಧ ದೂರು ನೀಡಲು ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಪೂಕೋಯಾ ತಂಙಲ್ ಮುಂದಾಗಿದ್ದಾರೆ. ಈ ಮಧ್ಯೆ ಪಯ್ಯನ್ನೂರು ಶಾಖೆಯಿಂದ ಐದೂವರೆ ಕಿಲೋ ಚಿನ್ನ , ರತ್ನ ಮತ್ತು 50 ಲಕ್ಷ ರೂ. ಕಳ್ಳ ಸಾಗಣೆ ಮಾಡಲಾಗಿದೆ ಎಂದು ಕಣ್ಣೂರು ಎಸ್ಪಿಗೆ ದೂರು ನೀಡಲಾಗಿದೆ. ಹೂಡಿಕೆ ಹಗರಣದಲ್ಲಿ ಪೂಕೋಯಾ ತಂಙಲ್ ಅವರು ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ಅವರ ಪಾಲುದಾರರಾಗಿದ್ದಾರೆ.
ಕಳೆದ ನವೆಂಬರ್ನಲ್ಲಿ ಪಯ್ಯನ್ನೂರು ಶಾಖೆಯನ್ನು ನಾಲ್ಕು ಮಂದಿ ನಿರ್ದೇಶಕರಿಗೆ ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸಲಾಗಿತ್ತು. ಇದರ ಮರೆಯಲ್ಲಿ ಚಿನ್ನ ಕಳ್ಳ ಸಾಗಣೆ ಮಾಡಲಾಗಿದೆ. 30 ಮಂದಿ ನೌಕರರು ಇದರಲ್ಲಿ ಒಳಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೂಡಿಕೆ ವಂಚನೆಗೆ ಸಂಬಂಧಿಸಿದಂತೆ ಪ್ರಸ್ತುತ 86 ವಂಚನೆ ಪ್ರಕರಣಗಳು ಮಂಜೇಶ್ವರ ಶಾಸಕರ ಮೇಲೆ ದಾಖಲಾಗಿವೆ ಎಂಬುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ.