ಕಾಸರಗೋಡು: ಮಾನಸಿಕ ಅಸ್ವಸ್ಥನೆಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬ ಸಂಬಂಧಿಕರಾದ ನಾಲ್ವರನ್ನು ಕಡಿದು ಕೊಚ್ಚಿ ಕೊಲೆಗೈದ ಅಮಾನವೀಯ ಘಟನೆ ಸೋಮವಾರ ಸಂಜೆ ಬಾಯಾರು ಸಮೀಪದ ಕನಿಯಾಲ ಸುದೆಂಬಳ ಗುರುಕುಮೇರಿ ಎಂಬಲ್ಲಿ ನಡೆದಿದೆ.
ಗುರುಕುಮೇರಿಯ ಸದಾಶಿವ, ವಿಠಲ, ಬಾಬು, ದೇವಕಿ ಎಂಬವರು ಕೊಲೆಯಾದ
ನತದೃಷ್ಟರು. ಹತ್ಯೆಯಾದವರ ಸಂಬಂಧಿಕ, ಮಾನಸಿಕ ಅಸ್ವಸ್ಥನಾದ ಉದಯ (40) ಎಂಬಾತ ಇವರು ನಾಲ್ವರನ್ನೂ ಕೊಲೆಗೈದನೆಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಉದಯನನ್ನು ಸೆರೆ ಹಿಡಿದು ಕಟ್ಟಿಹಾಕಿ ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದರು. ಘಟನೆ ನಡೆಯುತ್ತಿರುವಂತೆ ಉದಯನ ತಾಯಿ ಲಕ್ಷ್ಮೀ ಓಡಿ ಪ್ರಾಣಾಪಾಯದಿಂದ ಪಾರಾದರು. ದಾರಿಗೆ ಸಂಬಂಧಿಸಿದ ವೈಮನಸ್ಸು ಕೊಲೆಗೆ ಕಾರಣವಾಗಿರಬೇಕೆಂದು ಸಂಶಯಿಸಲಾಗಿದೆ. ಕೊಲೆಗೈಯ್ಯಲ್ಪಟ್ಟ ಸದಾಶಿವ, ವಿಠಲ ಹಾಗೂ ಬಾಬು ಎಂಬವರು ಉದಯನ ಸೋದರ ಮಾವಂದಿರಾಗಿದ್ದು , ದೇವಕಿ ಅತ್ತೆಯೆಂದು ತಿಳಿದುಬಂದಿದೆ.
ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬಾಯಾರು ಸಮೀಪದ ಕನಿಯಾಲ ಸುದೆಂಬಳ ಗುರಿಕುಮೇರಿಯಲ್ಲಿ ನಡೆದ ಈ
ಕೃತ್ಯವು ಇಡೀ ನಾಡನ್ನು ಬೆಚ್ಚಿಬೀಳಿಸಿದೆ.