ಕಾಸರಗೋಡು: ಕಾಸರಗೋಡು – ಮಂಗಳೂರು ನಡುವೆ ಕೆಎಸ್ಆರ್ ಟಿಸಿ ಅಂತಾರಾಜ್ಯ ಬಸ್ ಸರ್ವೀಸ್ ಶೀಘ್ರವೇ ಪುನರ್ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕೆಎಸ್ಆರ್ ಟಿಸಿ ಮಂಗಳೂರು ವಿಭಾಗೀಯ ಸಂಚಲನ ಅಧಿಕಾರಿ ಎಚ್.ಆರ್.ಕಮಲ್ ಕುಮಾರ್ ಅವರನ್ನು ಮಂಜೇಶ್ವರದ ಬಿಜೆಪಿ ನಿಯೋಗವು ಶನಿವಾರ ಬೆಳಗ್ಗೆ ಭೇಟಿಯಾಗಿ ಮನವಿ ಸಲ್ಲಿಸಿತು. ಓಬಿಸಿ ಮೋರ್ಚಾ ಕೇರಳ ರಾಜ್ಯ ಕೋಶಾಧಿಕಾರಿ, ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಲಾಕ್ ಡೌನ್ ನಿಮಿತ್ತ ಕಳೆದ ಆರೂವರೆ ತಿಂಗಳುಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದೀಗ ಅನ್ ಲಾಕ್ ಜಾರಿಗೆ ಬಂದು ಅಂತಾರಾಜ್ಯ ಗಡಿ ತೆರವುಗೊಂಡರೂ ಬಸ್ ಸಂಚಾರ ಆರಂಭವಾಗಿಲ್ಲ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿರುವ ನಿತ್ಯ ಉದ್ಯೋಗಿಗಳು, ವ್ಯಾಪಾರಿಗಳು ಅಲ್ಲದೆ ಸಾರ್ವಜನಿಕರು ಭಾರೀ ಸಂಕಷ್ಟಕ್ಕೀಡಾಗಿದ್ದಾರೆ. ರೋಗಿಗಳು ಹಾಗೂ ವಿದ್ಯಾರ್ಥಿಗಳು ಕೂಡ ಸಮಸ್ಯೆ ಅನುಭವಿಸುವಂತಾಗಿದೆ. ಆದ್ದರಿಂದ ಶೀಘ್ರವೇ ಅಂತಾರಾಜ್ಯ ಬಸ್ ಸಂಚಾರ ಆರಂಭಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ., ಓಬಿಸಿ ಮೋರ್ಚಾ ಮಂಜೇಶ್ವರ ಪಂಚಾಯತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾ ಪ್ರಸನ್ನ ಆಚಾರ್ಯ, ಯುವಮೋರ್ಚಾ ಪಂಚಾಯತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ , ಕಾರ್ಯದರ್ಶಿ ಎಸ್.ರಾಜ್ ಉದ್ಯಾವರ, ಓಬಿಸಿ ಮೋರ್ಚಾ ಮೀಡಿಯಾ ಸೆಲ್ ಸಂಚಾಲಕ ರತನ್ ಕುಮಾರ್ ಹೊಸಂಗಡಿ ನಿಯೋಗದಲ್ಲಿದ್ದರು.