Monday, August 15, 2022

Latest Posts

ಕಾಸರಗೋಡು-ಮಂಗಳೂರು ಕೆಎಸ್ಆರ್ ಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡದ ಡಿಸಿ, ಉಸ್ತುವಾರಿ ಸಚಿವರ ಕ್ರಮ ಖಂಡನೀಯ: ಬಿಜೆಪಿ

ಕುಂಬಳೆ: ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೆಎಸ್ಆರ್ ಟಿಸಿ ಮಂಗಳೂರು ವಿಭಾಗ ಇವುಗಳು ಅಂತಾರಾಜ್ಯ ಬಸ್ ಸಂಚಾರಕ್ಕೆ ಅನುಮತಿ ನೀಡಿದರೂ ಕಾಸರಗೋಡು ಜಿಲ್ಲಾಡಳಿತ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೇರಳ ಗಡಿ ಪ್ರವೇಶಕ್ಕೆ ಅನುಮತಿ ನೀಡದೆ ಇರುವುದು ಅತ್ಯಂತ ಖಂಡನೀಯ ಮತ್ತು ಇದು ಯಾರ ಓಲೈಕೆಗಾಗಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪ್ರಶ್ನಿಸಿದೆ.
ಬಸ್ ಸಂಚಾರ ವಿಷಯದಲ್ಲಿ ಮಂಗಳೂರು ಡಿಪ್ಪೋ ಹಾಗೂ ಕಾಸರಗೋಡು ಡಿಪ್ಪೋ ಪರಸ್ಪರ ಸಭೆ ನಡೆಸಿ ಬಸ್ ಸಂಚಾರಕ್ಕೆ ಸಿದ್ಧತೆ ನಡೆಸಿರುವಾಗ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಇ.ಚಂದ್ರಶೇಖರನ್ ಅನುಮತಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಉದ್ಯೋಗ, ಆರೋಗ್ಯ , ಶಿಕ್ಷಣ ಮುಂತಾದ ವಲಯಗಳಲ್ಲಿ ಮಂಗಳೂರನ್ನೇ ಆಶ್ರಯಿಸಿರುವ ಗಡಿನಾಡಿನ ಜನತೆಯ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕ್ರಮದ ವಿರುದ್ಧ ಬಿಜೆಪಿ ಪ್ರಬಲ ಪ್ರತಿಭಟನೆಗೆ ತೀರ್ಮಾನಿಸಿದೆ.
ಕೇರಳ – ಕರ್ನಾಟಕ ಗಡಿಗೆ ಮಣ್ಣು ಹಾಕಿದ ಕಾಸರಗೋಡು ಜಿಲ್ಲಾಡಳಿತವು ಕೇಂದ್ರ ಸರಕಾರ ಹಾಗೂ ಕೇರಳ ಹೈಕೋರ್ಟ್ ನ ಆದೇಶಕ್ಕೂ ಮಾನ್ಯತೆ ನೀಡದೆ ಬೀದಿಯಲ್ಲಿ ಹೋರಾಟ ಮಾಡುವಂತೆ ಮಾಡಿ ಜನತೆಯ ತಾಳ್ಮೆ ಪರೀಕ್ಷಿಸಿ ಕೈ ಸುಟ್ಟುಕೊಂಡ ಬಳಿಕ ಉದ್ದೇಶಪೂರ್ವಕವಾಗಿ ಮಂಗಳೂರು ಬಸ್ ಸಂಚಾರಕ್ಕೆ ತಡೆಯೊಡ್ಡಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ಕಾಸರಗೋಡಿನಿಂದ ತಲಪ್ಪಾಡಿ ತನಕ ಕೇರಳ ಕೆಎಸ್ಆರ್ ಟಿಸಿ ಮತ್ತು ಮಂಗಳೂರಿನಿಂದ ತಲಪ್ಪಾಡಿ ವರೆಗೆ ಕರ್ನಾಟಕ ಕೆಎಸ್ಆರ್ ಟಿಸಿ ಬಸ್ ಸಂಚಾರ ನಡೆಸುತ್ತಿರುವಾಗ ಕಾಸರಗೋಡು – ಮಂಗಳೂರು ಬಸ್ ಸಂಚಾರ ತಡೆದಿರುವ ಕಾಸರಗೋಡು ಜಿಲ್ಲಾಧಿಕಾರಿಯವರ ನಿರ್ಧಾರ ಒಪ್ಪುವಂತದಲ್ಲ ಎಂದು ಬಿಜೆಪಿ ಮಂಡಲ ಸಮಿತಿಯು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss