Sunday, August 14, 2022

Latest Posts

ಕಾಸರಗೋಡು| ರೂಪಶ್ರೀ ಕೊಲೆ ಪ್ರಕರಣ: ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು!

ಕಾಸರಗೋಡು: ಮೀಯಪದವು ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ರೂಪಶ್ರೀ (40) ಕೊಲೆ ಪ್ರಕರಣದ ಆರೋಪಿಗಳಾದ ಮೀಂಜ ಗ್ರಾಮದ ಮೀಯಪದವು ನಿವಾಸಿ ವೆಂಕಟ್ರಮಣ ಕಾರಂತ(42) ಹಾಗು ಮೀಯಪದವಿನ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಸೋಂಕಾಲು ಕೊಡಂಗೆ ನಿವಾಸಿ ನಿರಂಜನ ಕುಮಾರ್ ಕೆ.(23)ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.


ತಲಾ ಇಬ್ಬರನ್ನೊಳಗೊಂಡ ವೈಯಕ್ತಿಕ ಬಾಂಡ್‌ನೊಂದಿಗೆ ತಲಾ ಒಂದು ಲಕ್ಷ ರೂ. ಮೊತ್ತದೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಕೇಸಿನ ವಿಚಾರಣೆ ಮುಗಿಯುವ ವರೆಗೆ ಆರೋಪಿಗಳು ಕಾಸರಗೋಡು ಜಿಲ್ಲೆ ಪ್ರವೇಶಿಸಬಾರದು, ತುರ್ತು ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ಮಾತ್ರ ಆರೋಪಿಗಳಿಬ್ಬರಿಗೂ ಜಿಲ್ಲೆಗೆ ಪ್ರವೇಶಿಸಬಹುದಾಗಿದೆ. ಕೇಸಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿಯಾಗುವುದು, ಅವರಿಗೆ ಒತ್ತಡ ಅಥವಾ ಬೆದರಿಕೆಯೊಡ್ಡುವುದು ಮಾಡಬಾರದು. ಜಾಮೀನಿನಲ್ಲಿ ಹೊರ ಬಂದ ನಂತರ ಯಾವುದೇ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಬಾರದು, ನ್ಯಾಯಾಲಯದ ಅನುಮತಿಯಿಲ್ಲದೆ ಕೇರಳದಿಂದ ಹೊರಗೆ ತೆರಳಬಾರದು, ಆರೋಪಿಗಳಿಬ್ಬರೂ ತಮ್ಮ ಪಾಸ್‌ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಆರೋಪಿಗಳ ಜಾಮೀನನ್ನು ರದ್ದುಗೊಳಿಸುವ ಅಕಾರ ನ್ಯಾಯಾಲಯಕ್ಕಿರುವುದಾಗಿ ತಿಳಿಸಿದೆ.
ಆರೋಪಿಗಳ ವಿರುದ್ಧ ಕ್ರೈಂ ಬ್ರಾಂಚ್ ತನಿಖೆ ಪೂರ್ತಿಗೊಳಿಸಿದ ಬಳಿಕ ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ದ್ವಿತೀಯ)ದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
2020 ಜ. 16ರಂದು ಚಿಗುರುಪಾದೆ ನಿವಾಸಿ, ಮೀಯಪದವು ಶಿಕ್ಷಕಿ ರೂಪಶ್ರೀ(40)ಯವರು ಶಾಲೆಗೆಂದು ತೆರಳಿದವರು ನಿಗೂಢವಾಗಿ ನಾಪತ್ತೆಯಾಗಿದ್ದು, ಮನೆಮಂದಿ ಹುಡುಕಾಟದ ವೇಳೆ ಅವರ ಸ್ಕೂಟಿ ಹೊಸಂಗಡಿ ಸಮೀಪ ದುರ್ಗಿಪಳ್ಳದಲ್ಲಿ ಪತ್ತೆಯಾಗಿತ್ತು. ಅವರ ಪತಿ ಚಂದ್ರಶೇಖರ್‌ರವರ ದೂರಿನನ್ವಯ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಜ.18ರಂದು ಬೆಳಗ್ಗೆ ಪೆರುವಾಡ್ ಕಡಪ್ಪುರದಲ್ಲಿ ಮೃತದೇಹ ಪತ್ತೆಯಾಗಿತ್ತು. ಜ.24ರಂದು ಆರೋಪಿಗಳಾದ ವೆಂಕಟ್ರಮಣ ಕಾರಂತ ಹಾಗೂ ನಿರಂಜನ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss