ಕಾಸರಗೋಡು: ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ನಂಬ್ರ ಜೋಡಣೆ ನಡೆಸಲು ಕಾಸರಗೋಡು ಜಿಲ್ಲೆಯಲ್ಲಿ ಇನ್ನೂ ಒಂದು ಲಕ್ಷದಷ್ಟು ಮಂದಿ ಬಾಕಿ ಇದ್ದಾರೆ. ಆಧಾರ್ ನಂಬ್ರವನ್ನು ರೇಷನ್ ಕಾರ್ಡ್ ನೊಂದಿಗೆ ಜೋಡಿಸುವಂತೆ ಕೇಂದ್ರ ಮತ್ತು ಕೇರಳ ಸರಕಾರಗಳು ಕಳೆದ ಮೂರು ವರ್ಷಗಳಿಂದ ನಿರ್ದೇಶನ ನೀಡುತ್ತಾ ಬಂದಿವೆ. ಆದರೂ ಜಿಲ್ಲೆಯಲ್ಲಿ ಇದುವರೆಗೆ ನಂಬ್ರ ಜೋಡಣೆ ನಡೆಸಿರುವುದು ಶೇಕಡಾ 93.14ರಷ್ಟು ರೇಷನ್ ಕಾರ್ಡ್ ಮಾಲಕರು ಮಾತ್ರ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ.
ಇದೇ ವೇಳೆ ರೇಷನ್ ಕಾರ್ಡ್ ನೊಂದಿಗೆ ಆಧಾರ್ ನಂಬ್ರ ಜೋಡಣೆ ನಡೆಸದೇ ಇರುವ ರೇಷನ್ ಕಾರ್ಡ್ ದಾರರಿಗೆ ಮುಂದಿನ ತಿಂಗಳಿನಿಂದ ರೇಷನ್ ಸಾಮಗ್ರಿಗಳು ದೊರಕದೆಂಬ ನಿರ್ದೇಶನವನ್ನು ರಾಜ್ಯ ಸರಕಾರವು ನೀಡಿದೆ. ಆದ್ದರಿಂದ ಜೋಡಣೆ ನಡೆಸದೇ ಇರುವ ಕಾರ್ಡ್ ಮಾಲಕರು ಅದನ್ನು ಈ ತಿಂಗಳೊಳಗಾಗಿ ನೋಂದಾಯಿಸುವಂತೆ ಸರಕಾರವು ಸ್ಪಷ್ಟಪಡಿಸಿದೆ.
ಜಿಲ್ಲೆಯಲ್ಲಿ 14,702,79 ಮಂದಿ ರೇಷನ್ ಕಾರ್ಡ್ ಸದಸ್ಯತ್ವ ಹೊಂದಿದ್ದಾರೆ. ಈ ಪೈಕಿ 13,69,514 ಮಂದಿ ಮಾತ್ರವೇ ತಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ನಂಬರ್ ಜೋಡಣೆ (ಶೇಕಡಾ 93.14) ನಡೆಸಿದ್ದಾರೆ. 1,00,765 ಮಂದಿ ಇನ್ನೂ ಜೋಡಣೆ ನಡೆಸಿಲ್ಲ ಎಂದು ತಿಳಿಸಲಾಗಿದೆ. ಕಾಸರಗೋಡು ತಾಲೂಕಿನಲ್ಲಿ 35,645, ಮಂಜೇಶ್ವರ ತಾಲೂಕಿನಲ್ಲಿ 28,397, ಹೊಸದುರ್ಗದಲ್ಲಿ 27,947, ವೆಳ್ಳರಿಕುಂಡುವಿನಲ್ಲಿ 8776 ಮಂದಿ ಇನ್ನೂ ತಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ನಂಬರ್ ಜೋಡಣೆ ನಡೆಸಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಜೋಡಣೆ ನಡೆಸದ ರೇಷನ್ ಕಾರ್ಡ್ ಮಾಲಕರು ತಕ್ಷಣ ಗಮನಿಸಬೇಕೆಂದು ಇಲಾಖೆ ಹೇಳಿದೆ.