Sunday, August 14, 2022

Latest Posts

ಕಾಸರಗೋಡು| ವರ್ಕಾಡಿ ಗಡಿ ತೆರವುಗೊಳಿಸದಂತೆ ಸಿಪಿಎಂ, ಮುಸ್ಲಿಂಲೀಗ್ ನಿಂದ ಷಡ್ಯಂತ್ರ: ಬಿಜೆಪಿ ಆರೋಪ

ಕಾಸರಗೋಡು: ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ನಾಟಕ ಭಾಗದ ಗಡಿಯನ್ನು ತೆರವುಗೊಳಿಸಲು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಕರ್ನಾಟಕದ ಸಚಿವರಲ್ಲಿ ಪರಿಸ್ಥಿತಿ ವಿವರಿಸಿ ಸಂಚಾರಕ್ಕೆ ಕರ್ನಾಟಕ ಸರಕಾರದ ಅನುಮತಿ ದೊರೆತಾಗ ವರ್ಕಾಡಿಯ ಸಿಪಿಎಂ, ಮುಸ್ಲಿಂಲೀಗ್, ಕಾಂಗ್ರೆಸ್ ಮತ್ತು ಪಂಚಾಯತ್ ನ ಯುಡಿಎಫ್ ಆಡಳಿತ ಸಮಿತಿಯು ಒಳಗಿಂದೊಳಗೆ ಕಾಸರಗೋಡು ಜಿಲ್ಲಾಡಳಿತದ ಮೂಲಕ ಒತ್ತಡ ಹೇರಿ ಕೇರಳ ಸರಕಾರವು ಗಡಿಭಾಗದಲ್ಲಿ ಮಣ್ಣು ಹಾಕಿ ಬ್ಯಾರಿಕೇಡ್ ಇಟ್ಟು ಸಮಸ್ಯೆಯನ್ನು ಜೀವಂತವಾಗಿರಿಸಿವೆ.
ವರ್ಕಾಡಿ ಹಾಗೂ ಆಸುಪಾಸಿನ ಜನರ ದೈನಂದಿನ ಸಂಚಾರ ಸಮಸ್ಯೆ ಮತ್ತು ಈ ಭಾಗದ ಗಡಿ ಸಮಸ್ಯೆ ಪರಿಹಾರವಾಗದೇ ಇರಲು ಆ ಮೂರು ಪಕ್ಷಗಳೇ ನೇರ ಹೊಣೆ ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯು ಗಂಭೀರವಾಗಿ ಆರೋಪಿಸಿದೆ.
ವರ್ಕಾಡಿ ಪಂಚಾಯತ್ ನ ಬಹುತೇಕ ಜನರು ಸಂಪೂರ್ಣವಾಗಿ ಕರ್ನಾಟಕವನ್ನು ಅವಲಂಬಿಸಿರುವರು. ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ, ಕೂಲಿ ಕಾರ್ಮಿಕರು, ಗಾರೆ ಕೆಲಸ, ಕೃಷಿ ಉತ್ಪನ್ನಗಳ ಮಾರಾಟ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಾಡಿಗೆ ವಾಹನದವರು ಹೀಗೆ ಪ್ರತಿಯೊಂದು ವಿಭಾಗದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಹಲವಾರು ಮಂದಿ ಈಗಾಗಲೇ ಕರ್ನಾಟಕದ ಉದ್ಯೋಗ ಕಳೆದುಕೊಂಡಿದ್ದಾರೆ. ಒಪ್ಪೊತ್ತಿನ ಊಟಕ್ಕೆ ಎಷ್ಟು ಕಷ್ಟವಿದೆ ಎಂದು ಅರಿಯದಂತಹ ಇಂತಹ ರಾಜಕೀಯ ಪಕ್ಷಗಳ ನಿಜ ಬಣ್ಣ ಜನತೆಗೆ ಸಂಪೂರ್ಣ ಅರಿವಾಗಿದೆ. ಬಡವರ ಪಕ್ಷ ಎಂದು ಹೇಳಿಕೊಂಡು ತಿರುಗುವ ಸಿಪಿಎಂಗೆ ಬಡವರ ಬಗ್ಗೆ ಒಂದಿನಿತೂ ಕಾಳಜಿ ಇಲ್ಲ. ಕೋಟಿಗಟ್ಟಲೆ ಮೊತ್ತದ ಚಿನ್ನದ ಕಳ್ಳ ಸಾಗಾಟ ಮಾಡಿದವರಿಗೆ ಬಡವರ ನೆನಪು ಎಲ್ಲಿ ಬಂದೀತು ಎಂದು ಬಿಜೆಪಿ ಪಂಚಾಯತ್ ಸಮಿತಿಯು ಲೇವಡಿ ಮಾಡಿದೆ.
ಮುಸ್ಲಿಂಲೀಗ್ ನ ಶಾಸಕರು, ಕಾಂಗ್ರೆಸ್ ನ ಸಂಸದರಿಗೆ ಜನತೆಯ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಯೋಗ್ಯತೆ ಇಲ್ಲವೇ ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ. ವರ್ಕಾಡಿಯಲ್ಲಿ ಕೇರಳ – ಕರ್ನಾಟಕ ಗಡಿ ತೆರವುಗೊಳಿಸಿ ಜನರ ಸಂಚಾರ ಸ್ವಾತಂತ್ರ್ಯಕ್ಕೆ ವ್ಯವಸ್ಥೆ ಮಾಡಬೇಕು. ಕೇಂದ್ರ ಸರಕಾರವೇ ತನ್ನ ಕೋವಿಡ್ ನಿಬಂಧನೆಯಲ್ಲಿ ಅಂತಾರಾಜ್ಯ ಸಂಚಾರಕ್ಕೆ ಅನುಮತಿ ನೀಡಿರುವಾಗ ಕೇರಳ ಸರಕಾರ ಮತ್ತು ಕಾಸರಗೋಡು ಜಿಲ್ಲಾಡಳಿತದ ಕ್ರಮ ಖಂಡನೀಯ ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss