ಕಾಸರಗೋಡು: ಆಟೋರಿಕ್ಷಾಗಳಿಗೆ ಹೆಚ್ಚಿಸಿದ ವಿಮೆ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಬೇಕು, ಕೊರೋನಾ ಲಾಕ್ ಡೌನ್ ಕಾಲದ ಪ್ರೀಮಿಯಂ ರದ್ದುಪಡಿಸಬೇಕು, ಆಟೋ ಚಾಲಕರ ಸಮಸ್ಯೆಗಳನ್ನು ಬಗೆಹರಿಸಿ ಬದುಕಲು ವ್ಯವಸ್ಥೆ ಮಾಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಆಟೋರಿಕ್ಷಾ ಮಜ್ದೂರು ಸಂಘ (ಬಿಎಂಎಸ್)ದ ಕಾಸರಗೋಡು ವಲಯ ಸಮಿತಿಯ ಆಶ್ರಯದಲ್ಲಿ ನ್ಯಾಷನಲ್ ಇನ್ಶೂರೆನ್ಸ್ ಮತ್ತು ನ್ಯೂ ಇಂಡಿಯಾ ಇನ್ಶೂರೆನ್ಸ್ ಎಂಬೀ ಕಂಪೆನಿಗಳ ಕಚೇರಿಗಳ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು.
ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಕೆ.ವಿ.ಬಾಬು ಧರಣಿಯನ್ನು ಉದ್ಘಾಟಿಸಿದರು. ವಲಯ ಅಧ್ಯಕ್ಷ ಎಸ್.ಕೆ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ನಗರಸಭಾ ಸಮಿತಿ ಕಾರ್ಯದರ್ಶಿ ರಿಜೇಶ್ ಕೆ., ಸತೀಶ್ ಪಾರೆಕಟ್ಟೆ , ಸುಂದರ ಪೂಜಾರಿ, ಪ್ರಸಾದ್ ಮಾತನಾಡಿದರು. ವಲಯ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ಮೋಹನ್ ದಾಸ್ ಕೊರಕ್ಕೋಡು ವಂದಿಸಿದರು.