Wednesday, August 10, 2022

Latest Posts

ಕಾಸರಗೋಡು| ಸಂಪರ್ಕದ ಮೂಲಕ ಕೊರೋನಾ ಹರಡದಂತೆ ಗರಿಷ್ಠ ಎಚ್ಚರಿಕೆ ವಹಿಸಬೇಕು: ಕಂದಾಯ ಸಚಿವ

ಕಾಸರಗೋಡು:  ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಕೋವಿಡ್ ಹರಡದಂತೆ ಅತೀವ ಜಾಗ್ರತೆ ವಹಿಸಬೇಕು ಎಂದು ರಾಜ್ಯ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಕೋವಿಡ್ ಪ್ರತಿರೋಧ ಸಂಬಂಧ ಜನಪ್ರತಿನಿಧಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಕೋವಿಡ್ ಹರಡುವಿಕೆ ನಿಯಂತ್ರಣದಲ್ಲಿದೆ. ಈ ವರೆಗೆ 11 ಮಂದಿಗೆ ಮಾತ್ರ ಸಂಪರ್ಕ ಮೂಲಕ ಈ ರೋಗ ತಗುಲಿದೆ. ಇತರ ರಾಜ್ಯಗಳಿಂದ, ವಿದೇಶಗಳಿಂದ ಆಗಮಿಸುವ ಮಂದಿಗೆ ಮನೆಗಳಲ್ಲಿ ಕ್ವಾರೆಂಟೈನ್ ಕಡ್ಡಾಯಯವಾಗಿದೆ. ಅನಿವಾರ್ಯವಾದಲ್ಲಿ ಸಾಂಸ್ಥಿಕ ನಿಗಾ ವ್ಯವಸ್ಥೆ ಒದಗಿಸಲಾಗುವುದು ಎಂದವರು ವಿವರಿಸಿದರು. ಜಿಲ್ಲಾಡಳಿತವು ಈ ಸಂಬಂಧ ನಡೆಸುತ್ತಿರುವ ಅವಿರತ ಯತ್ನಗಳಿಗೆ ಜನಪ್ರತಿನಿಧಿಗಳ ಬೆಂಬಲ ಅನಿವಾರ್ಯ ಎಂದು ತಿಳಿಸಿದರು. ಪ್ರತಿರೋಧ ಚಟುವಟಿಕೆಗಳ ಸಂಬಂಧ ವಿವಿಧ ವಿಚಾರಗಳಲ್ಲಿ ಸಮಗ್ರ ಚರ್ಚೆ ನಡೆಸಲಾಯಿತು.
ಇನ್ನು ಮುಂದೆ ಕೋವಿಡ್ ಪ್ರತಿರೋಧ ಸಂಬಂಧ ಅವಲೋಕನ ಸಭೆಯನ್ನು ಪ್ರತಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು , ಎಂ.ಸಿ.ಖಮರುದ್ದೀನ್, ಎಂ.ರಾಜಗೋಪಾಲನ್, ಕೆ.ಕುಂಞರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ , ಕಾಞಂಗಾಡು ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್, ಗ್ರಾಮ ಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಕೆ.ಕೆ.ರೆಜಿಕುಮಾರ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ನಡೆಸಲಾದ ಚರ್ಚೆಗಳು
ಜನ್ಮ ಶತಾಬ್ಧಿ ಎಕ್ಸ್ ಪ್ರೆಸ್ ರೈಲು ಕಣ್ಣೂರಿಗೆ ಆಗಮಿಸುವ ಅವಧಿಯಲ್ಲಿ ಮತ್ತು ಹೊರಡುವ ಸಮಯದಲ್ಲಿ ಕಾಸರಗೋಡು ಜಿಲ್ಲೆಗೆ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಬೇಕು ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆಗ್ರಹಿಸಿದರು.
ಮಂಗಳೂರಿನಿಂದ ಕೇರಳಕ್ಕೆ ಮೆಮು ಸರ್ವೀಸ್ ಆರಂಭಿಸಬೇಕು. ಡ್ರೈ ವಿಂಗ್ ಸ್ಕೂಲ್ ಗಳು ಚಟುವಟಿಕೆ ಪುನರಾರಂಭಿಸಲು ಅನುಮತಿ ನೀಡಬೇಕು. ಮಂಗಳೂರಿಗೆ ತೆರಳುವವರ ಮತ್ತು ಮಂಗಳೂರಿನಿಂದ ಮರಳುವವರ ಯಾತ್ರಾ ಪಾಸ್ ಸೌಲಭ್ಯ ವಿಚಾರದಲ್ಲಿ ಖಚಿತತೆ ಬೇಕು ಎಂಬ ಬೇಡಿಕೆಗಳು ಸಭೆಯಲ್ಲಿ ಮೂಡಿಬಂದವು. ಅಲ್ಲದೆ ವಿವಿಧ ವಿಚಾರಗಳಲ್ಲಿ ಸಮಗ್ರ ಚರ್ಚೆಗಳು ನಡೆದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss