ಕಾಸರಗೋಡು: ಮಹಿಳೆಯರದ್ದೇ ಸಂಘಟನೆ ಎಂಬ ಖ್ಯಾತಿ ಹೊಂದಿರುವ ಕಾಸರಗೋಡು ಜಿಲ್ಲಾ ಕುಟುಂಬಶ್ರೀ ಮಿಷನ್ ಸೇರಿದಂತೆ ಕೇರಳದ ಎಲ್ಲ ಕುಟುಂಬಶ್ರೀ ಘಟಕಗಳು ಶೀಘ್ರದಲ್ಲೇ ಡಿಜಿಟಲ್ ಆಗಿ ಮಾರ್ಪಡಲಿವೆ. ನ್ಯಾಷನಲ್ ರೂರಲ್ ಲೈವ್ಲಿ ಫುಡ್ ಮಿಷನ್ (ಎನ್ಆರ್ ಎಲ್ಎಂ) ಯೋಜನೆಯ ಪ್ರಕಾರ ಟ್ರಾನ್ಸಕ್ಷನ್ ಬೆಡ್ಸ್ ಡಿಜಿಟಲ್ ಅಕೌಂಟ್ ಸಿಸ್ಟಮ್ಸ್ ಮೂಲಕ ಡಿಜಿಟಲ್ ವ್ಯವಸ್ಥೆಗೆ ಸಜ್ಜಾಗಲು ಕುಟುಂಬಶ್ರೀ ಮಿಷನ್ ತೀರ್ಮಾನಿಸಿದೆ.
2017ರಲ್ಲಿ ಆರಂಭಗೊಂಡ ಈ ಯೋಜನೆಯನ್ನು 2020ರ ಕೊನೆಯಲ್ಲಿ ಪೂರ್ತಿಗೊಳಿಸಲು ನಿರ್ಧರಿಸಲಾಗಿದೆ. ಕುಟುಂಬಶ್ರೀಯು ರಾಜ್ಯದಲ್ಲಿ 2.34 ಲಕ್ಷ ನೆರೆಕರೆ ಕೂಟಗಳನ್ನು ಹೊಂದಿದ್ದು ಅವುಗಳಿಗೆ ಈ ಅತ್ಯಾಧುನಿಕ ಯೋಜನೆಯ ಪ್ರಯೋಜನ ಲಭಿಸಲಿದೆ. ಈ ಯೋಜನೆಯನ್ನು ಗ್ರಾಮೀಣ ವಲಯಗಳಲ್ಲೂ
ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಪ್ರಸ್ತುತ ಯೋಜನೆಯಂತೆ ನೆರೆಕರೆ ಕೂಟಗಳ ಫೆಬ್ರವರಿ ತಿಂಗಳ ತನಕದ ಎಲ್ಲ ಚಟುವಟಿಕೆಗಳನ್ನು ಈಗಾಗಲೇ ಡಿಜಿಟಲೈಸ್ ಮಾಡಲಾಗಿದೆ. ಈ ಮಧ್ಯೆ ಕೊರೋನಾ ಸೋಂಕು ಹರಡತೊಡಗಿದ ಕಾರಣದಿಂದಾಗಿ ಯೋಜನೆಯ ಮುಂದಿನ ಪ್ರಕ್ರಿಯೆಗೆ ಅಡಚಣೆ ಸೃಷ್ಟಿಯಾಯಿತೆಂದು ಕುಟುಂಬಶ್ರೀ ರಾಜ್ಯ ಮಿಷನ್ ಅಧಿಕಾರಿಗಳು ಹೇಳಿದ್ದಾರೆ.
ನೆರೆಕರೆ ಕೂಟಗಳಿಂದ ಎಡಿಸಿಗಳ ಮಾಹಿತಿಗಳನ್ನು ಸಂಗ್ರಹಿಸಿ ಡಿಸಿಎಸ್ ಮೂಲಕ ಡಾಟಾ ಎಂಟ್ರಿ ನಡೆಸಲಾಗುವುದು. ಡಿಜಿಟಲೈಸೇಶನ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೂಲಕ ಬ್ಯಾಂಕ್ ಗಳ ಹೆಚ್ಚು ಸೇವೆಗಳು ನೆರೆಕರೆ ಕೂಟಕ್ಕೆ ಲಭಿಸಲಿವೆ. ಸದಸ್ಯರ ಠೇವಣಿ ವ್ಯವಹಾರಗಳನ್ನು ಗಮನಿಸಿ ಅವರಿಗೆ ಸಾಲ ಒದಗಿಸುವ ಕ್ರಮವನ್ನು
ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.