Friday, August 19, 2022

Latest Posts

ಕಾಸರಗೋಡು ಸಂಸದರ ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್ ನ ಹಲವು ಮಂದಿ ಸಿಪಿಎಂಗೆ ಸೇರ್ಪಡೆ

ಕಾಸರಗೋಡು: ಯುಡಿಎಫ್ ನ ಪ್ರಮುಖ ಘಟಕ ಪಕ್ಷವಾದ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ ಹೊಗೆಯಾಡುತ್ತಿದ್ದುದು ಇದೀಗ ಹೊತ್ತಿ ಉರಿಯತೊಡಗಿದೆ. ಅದರಂತೆ 15ಕ್ಕಿಂತಲೂ ಮಿಕ್ಕಿದ ಯುಡಿಎಫ್ ಕಾರ್ಯಕರ್ತರು ಅಧಿಕೃತವಾಗಿ ಎಲ್ ಡಿಎಫ್ ಗೆ ಸೇರ್ಪಡೆಗೊಂಡಿದ್ದು , ಈ ಮೂಲಕ ಯುಡಿಎಫ್ ತೀವ್ರ ಮುಖಭಂಗಕ್ಕೊಳಗಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಕಾಸರಗೋಡಿನ ಸಂಸದನಾಗುವಲ್ಲಿ ಬಹುಮತದಿಂದ ಗೆಲ್ಲಿಸಿರುವುದು ಮುಸ್ಲಿಂಲೀಗ್ ಕಾರ್ಯಕರ್ತರಾಗಿದ್ದಾರೆ ಎಂದು ಸಂಸದ, ಕಾಂಗ್ರೆಸ್ ನೇತಾರ ರಾಜ್ ಮೋಹನ್ ಉಣ್ಣಿತ್ತಾನ್ ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಮಂಜೇಶ್ವರ ಮಂಡಲದ ಹಲವು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಇದೀಗ ಎಲ್‍ಡಿಎಫ್ ಗೆ ಪಕ್ಷಾಂತರಗೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಕಳೆದ ಲೋಕಸಭಾ ಚುನಾವಣೆಯ ಬಳಿಕ ಯುಡಿಎಫ್ ನೇತಾರರ ಅಸಮರ್ಪಕ ನಿರ್ಧಾರಗಳಿಂದ ರೋಸಿರುವ ಯುಡಿಎಫ್ ಕಾರ್ಯಕರ್ತರು ಒಂದು ವರ್ಷದ ಹಿಂದಿನಿಂದಲೇ ವಿರೋಧ ವ್ಯಕ್ತಪಡಿಸಿದ್ದರು.
ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಕೆಲವು ತಿಂಗಳುಗಳು ಇರುವಾಗಲೇ ನಡೆದಿರುವ ಈ ಬೆಳವಣಿಗೆ ಯುಡಿಎಫ್ ಗೆ ಭಾರೀ ಹೊಡೆತ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಬೇಜವಾಬ್ದಾರಿ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒಂದು ವಿಭಾಗದ ಯುಡಿಎಫ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದರೂ ಪಕ್ಷಗಳ ಪ್ರಮುಖ ನೇತಾರರು ನಿರ್ಲಕ್ಷ್ಯ ಧೋರಣೆ ತಳೆದಿರುವುದರಿಂದ ಮನನೊಂದು ಪಕ್ಷಾಂತರಗೈಯ್ಯುತ್ತಿರುವುದಾಗಿ ಸಿಪಿಎಂ ಪಕ್ಷ ಸೇರ್ಪಡೆಗೊಂಡ ಕೆಎಸ್‍ಯು (ಕೇರಳ ಸ್ಟೂಡೆಂಟ್ ಯೂನಿಯನ್) ಸದಸ್ಯರು ಸಹಿತ 15ಕ್ಕಿಂತಲೂ ಮಿಕ್ಕಿದ ಯವ ಕಾರ್ಯಕರ್ತರು ತಿಳಿಸಿದ್ದಾರೆ.
ಮಂಜೇಶ್ವರ ಮಂಡಲ ಸೇರಿದಂತೆ ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಯುಡಿಎಫ್ ಎರಡು ತಂಡಗಳಾಗಿ ವಿಭಜಿಸಲ್ಪಟ್ಟಿದ್ದು ಯುಡಿಎಫ್ ನಾಯಕರು ಮತ್ತು ಕಾರ್ಯಕರ್ತರ ಮಧ್ಯೆ ವೈಮನಸ್ಸು ಹೆಚ್ಚುತ್ತಾ ಹೋಗುತ್ತಿದೆ.
ಇದೇ ವೇಳೆ ಸಿಪಿಎಂಗೆ ಸೇರಿದ ಯುಡಿಎಫ್ ಕಾರ್ಯಕರ್ತರನ್ನು ಸಿಪಿಎಂ ನೇತಾರ ಕೆ.ಆರ್.ಜಯಾನಂದ, ಸುಬೈರ್ ಕುಂಬಳೆ ಮತ್ತು ಪ್ರಶಾಂತ್ ನೇತೃತ್ವದಲ್ಲಿ ಪಕ್ಷದ ಕೆಂಪು ಧ್ವಜದೊಂದಿಗೆ ಬರಮಾಡಿಕೊಳ್ಳಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!