ಕಾಸರಗೋಡು: ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಉನ್ನತ ಶಿಕ್ಷಣ ಖಾತೆ ಸಚಿವ ಕೆ.ಟಿ.ಜಲೀಲ್ ಮತ್ತು ಚಿನ್ನಾಭರಣ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸೆ.22 ರಂದು ಬೆಳಗ್ಗೆ 10.30ಕ್ಕೆ ಎನ್ಡಿಎ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಂಗಮ ನಡೆಯಲಿದೆ.
ಬಿಜೆಪಿ ಹಾಗೂ ಎನ್ಡಿಎ ರಾಜ್ಯಾಧ್ಯಕ್ಷರಾದ ಕೆ.ಸುರೇಂದ್ರನ್ ಪ್ರತಿಭಟನೆಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ನೇತಾರರು ಭಾಗವಹಿಸುವರು. ಜಿಲ್ಲೆಯಲ್ಲಿ ಸಚಿವ ಕೆ.ಟಿ.ಜಲೀಲ್ ಮತ್ತು ಶಾಸಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಇದುವರೆಗೆ ಬಿಜೆಪಿ ಮತ್ತು ಸಹ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇನ್ನು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಎನ್ಡಿಎ ನೇತೃತ್ವ ವಹಿಸಲು ಹಾಗೂ ಸಿಪಿಎಂ ಮತ್ತು ಮುಸ್ಲಿಂಲೀಗ್ ವಿರುದ್ಧ ಪ್ರಬಲ ಆಂದೋಲನ ಸಂಘಟಿಸಲು ಎನ್ಡಿಎ ತೀರ್ಮಾನಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಪ್ರತಿಭಟನಾ ಸಂಗಮ ಉದ್ಘಾಟಿಸುವುದರೊಂದಿಗೆ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನಾ ಅಭಿಯಾನ ಪ್ರಾರಂಭಿಸಲು ಎನ್ ಡಿಎ ನಿರ್ಧರಿಸಿದೆ.
ದೇಶದ್ರೋಹದ ಹೆಸರಿನಲ್ಲಿ ತನಿಖೆಗೆ ಹಾಜರಾದ ಸಚಿವ ಕೆ.ಟಿ.ಜಲೀಲ್ ಹಾಗೂ ವಂಚನೆ ಆರೋಪ ಎದುರಿಸುತ್ತಿರುವ ಶಾಸಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡುವ ವರೆಗೆ ಬಿಜೆಪಿ ಮತ್ತು ಎನ್ ಡಿಎ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಗಳು ಮುಂದುವರಿಯಲಿವೆ.