ಕಾಸರಗೋಡು: ಮಾಂಸದ ಕೋಳಿಗಳ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮಧ್ಯಸ್ಥಿಕೆ ವಹಿಸುತ್ತಿದೆ ಎಂಬ ಅರ್ಥದಲ್ಲಿ ಸುಳ್ಳು ಮಾಹಿತಿಗಳು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಇದು ಸತ್ಯಕ್ಕೆ ಸಂಪೂರ್ಣ ದೂರವಾದುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಮಾಂಸದ ಕೋಳಿಯ ಬೆಲೆ ನಿಗದಿಪಡಿಸಲಾಗಿದ್ದು , ಅದಕ್ಕಿಂತ ಅಧಿಕ ಬೆಲೆ ವಸೂಲಿ ಮಾಡಿದರೆ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಯೊಂದನ್ನೂ ಈ ವರದಿಯಲ್ಲಿ ಪ್ರಕಟಿಸಲಾಗಿದೆ. ಆದರೆ ಇಂತಹ ಯಾವುದೇ ಪ್ರಕಟಣೆಯನ್ನು ಜಿಲ್ಲಾಡಳಿತ ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದಕ್ಕೆ ಇಂತಹ ತಪ್ಪು ಮಾಹಿತಿ ಪ್ರಕಟಿಸಿದರೆ ಪೊಲೀಸ್ ಸೈಬರ್ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಆದೇಶ ನೀಡಿದ್ದಾರೆ. ಜಿಲ್ಲಾಡಳಿತದ ಆದೇಶ ಪ್ರಕಾರ ಜಿಲ್ಲಾ ವಾರ್ತಾ ಇಲಾಖೆ ಮುಖಾಂತರ ನೀಡಲಾಗುವ ಸುದ್ದಿಗಳಲ್ಲದೆ ಬೇರಾವುದನ್ನೂ ಪರಿಗಣಿಸುವಂತಿಲ್ಲ. ಮಾಂಸದ ಕೋಳಿಗಳ ಬೆಲೆ ಹೆಚ್ಚಳ ನಿಯತ್ರಣದ ಹೊಣೆಯನ್ನು ಜಿಲ್ಲಾ ಸಪ್ಲೈ ಅಧಿಕಾರಿ ಮತ್ತು ಲೀಗಲ್ ಮೆಟ್ರಾಲಜಿ ಇಲಾಖೆಯ ಅಧಿಕಾರಿಗೆ ವಹಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸುದ್ದಿ ಪ್ರಕಟಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.