ಕಾಸರಗೋಡು: ಕೇರಳದ ಎಲ್ಲ 14 ಜೆಲ್ಲೆಗಳಲ್ಲೂ ಮಳೆ ಇನ್ನಷ್ಟು ತೀವ್ರಗೊಳ್ಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇದೇ ವೇಳೆ ಕೇರಳದ ಸಮುದ್ರದಲ್ಲಿ ಪ್ರಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು , ಕರಾವಳಿ ಪ್ರದೇಶದ ನಿವಾಸಿಗಳು ಮತ್ತು ಸಾರ್ವಜನಿಕರು ಗರಿಷ್ಠ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ.
ಈ ಮಧ್ಯೆ ಕಾಸರಗೋಡು, ಕಣ್ಣೂರು, ಮಲಪ್ಪುರಂ, ಪಾಲಕ್ಕಾಡು, ತೃಶೂರು, ಇಡುಕ್ಕಿ , ಎರ್ನಾಕುಳಂ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು , ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಕಾಸರಗೋಡು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸತತವಾಗಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ತಿರುವನಂತಪುರ ಹವಾಮಾನ ನಿರೀಕ್ಷಣಾ ಕೇಂದ್ರ ತಿಳಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ ಸುರಿದ ಮಳೆಗೆ ಬಹುತೇಕ ನದಿ, ಹೊಳೆ, ತೋಡು, ಬಾವಿ, ಕೆರೆ ಸೇರಿದಂತೆ ವಿವಿಧ ಜಲಾಶಯಗಳಲ್ಲಿ ನೀರಿನ ಪ್ರಮಾಣ ಎಚ್ಚರಿಕೆಯ ಮಟ್ಟಕ್ಕೆ ತಲುಪಿದೆ. ಚಂದ್ರಗಿರಿ, ಮೊಗ್ರಾಲ್ ಪುತ್ತೂರು, ಕುಂಬಳೆ, ಶಿರಿಯ, ಉಪ್ಪಳ ಸಹಿತ ವಿವಿಧ ನದಿಗಳು ಉಕ್ಕಿ ಹರಿಯುತ್ತಿವೆ. ಮಳೆ ಮತ್ತಷ್ಟು ತೀವ್ರಗೊಂಡಲ್ಲಿ ರಾಜ್ಯದಲ್ಲಿ ಪ್ರವಾಹ ಭೀತಿ ತಲೆದೋರುವ ಸಾಧ್ಯತೆಯಿದೆ. ಧಾರಾಕಾರ ಮಳೆ ಹಾಗೂ ಬಲವಾದ ಗಾಳಿಗೆ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿ ಭಾರೀ ನಾಶನಷ್ಟ ಸಂಭವಿಸಿದೆ. ಕೊಲ್ಲಂ ಜಿಲ್ಲೆಯ ಕುಂದರ, ಕೊಟ್ಟಾರಕ್ಕರ, ಪುನಲೂರು, ಆಂಜಲ್, ಏರೂರು ಮುಂತಾದ ಪ್ರದೇಶಗಳಲ್ಲಿ ಅಪಾರ ಹಾನಿ ಉಂಟಾಗಿದೆ. ಅಲ್ಲದೆ ಚಾಲಕ್ಕುಡಿ ಮೋದಿರಕಣ್ಣಿ ಎಂಬಲ್ಲಿ ಸುಂಟರಗಾಳಿ ಬೀಸಿ ಭಾರೀ ನಾಶನಷ್ಟ ಸಂಭವಿಸಿದೆ. ಮುಂದಿನ ಕೆಲವು ದಿನಗಳ ಕಾಲ ಕಾಸರಗೋಡು ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.