ಕಾಸರಗೋಡು: ಕೇರಳ ರಾಜ್ಯದ ಐತಿಹಾಸಿಕ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಜೂನ್ 13ರಿಂದ ಭಕ್ತಾದಿಗಳಿಗೆ ಮತ್ತೆ ಪ್ರವೇಶ ನಿಷೇಧಿಸಲಾಗಿದೆ. ತೃಶ್ಯೂರು ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಕೋವಿಡ್-19 ರೋಗಬಾಧೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
ದೇವಸ್ಥಾನ ಸಮಿತಿ ತೀರ್ಮಾನದನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು , ಆದರೆ ದೇವಸ್ಥಾನದಲ್ಲಿ ನಿತ್ಯ ನೈಮಿತ್ತಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ ಎಂದು ಅವರು ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಜೂನ್ 13ರಂದು ಆಯೋಜಿಸಲಾಗಿದ್ದ ಎರಡು ಜೋಡಿ ವಿವಾಹ ಸಮಾರಂಭವು ಯಥಾಪ್ರಕಾರ ನಡೆದಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಹಿಂದೂ ಐಕ್ಯ ವೇದಿಕೆ ಸಹಿತ ಕೇರಳದ ವಿವಿಧ ಹಿಂದೂಪರ ಸಂಘಟನೆಗಳ ಪ್ರತಿಭಟನೆಯ ನಡುವೆಯೂ ದೇವಸ್ಥಾನಗಳನ್ನು ಕೇರಳದ ಎಡರಂಗ ಸರಕಾರವು ತೆರೆದು ಕಾರ್ಯಾಚರಿಸುವಂತೆ ಮಾಡಿತ್ತು. ಲಾಕ್ಡೌನ್ ವಿನಾಯಿತಿಯನ್ವಯ ಜೂನ್ 9ರಿಂದ ದೇವಸ್ಥಾನಗಳು ಭಕ್ತಾದಿಗಳಿಗೆ ದರ್ಶನಕ್ಕಾಗಿ ತೆರೆದುಕೊಂಡಿವೆ. ಈ ಮಧ್ಯೆ ದೇವಾಲಯಗಳಲ್ಲಿ ಲಾಕ್ ಡೌನ್ ನಿಬಂಧನೆಗಳನ್ನು ಪಾಲಿಸುವಂತೆ ಕೇಂದ್ರ ಮತ್ತು ಕೇರಳ ಸರಕಾರಗಳು ಭಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿವೆ.