ಕಾಸರಗೋಡು: ಕೊರೋನಾ ನಿಯಂತ್ರಣದಲ್ಲಿ ಕೇರಳ ರಾಜ್ಯ ಒಂದು ಹಂತಕ್ಕೆ ಯಶಸ್ಸಾಗಿದೆ. ದೇಶದಲ್ಲಿ ಮೊದಲ ಸೋಂಕು ಪತ್ತೆಯಾಗಿದ್ದ ರಾಜ್ಯವು ದಿನ ಕಳೆದಂತೆ ಸಂಪೂರ್ಣವಾಗಿ ಚೇತರಿಕೆ ಕಾಣುವ ಕಡೆ ಹೆಜ್ಜೆ ಇಟ್ಟಿತ್ತು.
ಇತರ ರಾಜ್ಯಗಳಿಗೆ ಹೋಲಿಸಿಕೊಂಡರೆ ಆಕ್ಟಿವ್ ಕೇಸುಗಳ ಸಂಖ್ಯೆ 21ರ ವರೆಗೂ ಇಳಿಕೆಯಾಗಿತ್ತು. ಇನ್ನೇನೂ ಕೇರಳ ಕೊರೋನಾ ಮುಕ್ತ ರಾಜ್ಯವಾಗುತ್ತೆ ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ರೆಡ್ ಝೋನ್ ಕಡೆ ಸಾಗುತ್ತಿದೆ.
ಕೇರಳದಲ್ಲಿ ಹೊಸ ಆತಂಕ ಸೃಷ್ಟಿಸುತ್ತಾ ಕೊರೋನಾ ವೈರಸ್ 3ನೇ ಅಲೆ?
ಕೊರೋನಾ ವೈರಸ್ ನ 3ನೇ ಅಲೆ ರಾಜ್ಯದಲ್ಲಿ ಹೊಸ ಆತಂಕ ಸೃಷ್ಟಿಸುವ ಲಕ್ಷಣ ಗೋಚರಿಸುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯಲ್ಲಿ ಒಬ್ಬರು ಒಳಗೊಂಡಂತೆ ಕೇರಳದಲ್ಲಿ ಭಾನುವಾರ ಕೋವಿಡ್ – 19 ವೈರಸ್ನ 14 ಪ್ರಕರಣ ದಾಖಲಾಗಿದೆ. ಮಲಪ್ಪುರಂ ಜಿಲ್ಲೆಯ ನಾಲ್ವರು, ಕಣ್ಣೂರು, ಕೋಯಿಕ್ಕೋಡ್, ಪಾಲಕ್ಕಾಡ್ನಲ್ಲಿ ತಲಾ ಇಬ್ಬರು, ತೃಶ್ಯೂರ್, ಎರ್ನಾಕುಳಂ ಹಾಗೂ ಕೊಲ್ಲಂನ ತಲಾ ಒಬ್ಬರು ಇತರ ಸೋಂಕಿತರು.
ಸೋಂಕಿತರಲ್ಲಿ ಇಬ್ಬರು ವಿದೇಶದಿಂದ ಆಗಮಿಸಿದ್ದರೆ, ಏಳು ಮಂದಿ ತಮಿಳ್ನಾಡಿನಿಂದ, ಇಬ್ಬರು ಮಹಾರಾಷ್ಟ್ರದಿಂದ ಆಗಮಿಸಿದ್ದರೆ, ಒಬ್ಬರು ಮಾಲ್ದೀವ್ಸ್ ನಿಂದ ಆಗಮಿಸಿದ ಉತ್ತರಪ್ರದೇಶ ನಿವಾಸಿ ಹಾಗೂ ಇನ್ನೊಬ್ಬರು ಕೊಲ್ಲಂ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡಿದ್ದಾರೆ. ರಾಜ್ಯದಲ್ಲಿ ಚಿಕಿತ್ಸೆಯಲ್ಲಿರುವವರಲ್ಲಿ ಭಾನುವಾರ ಯಾರೂ ಗುಣಮುಖರಾಗಿಲ್ಲ. ರಾಜ್ಯದಲ್ಲಿ ಕೋವಿಡ್ – 19 ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ 497 ಮಂದಿ ಗುಣಮುಖರಾಗಿದ್ದರೆ, ಪ್ರಸಕ್ತ 101 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2162 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1887 ಮಂದಿ ಮನೆಗಳಲ್ಲಿ ಹಾಗೂ 275 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 20 ಮಂದಿಯನ್ನು ಐಸೋಲೇಶನ್ ವಾರ್ಡಿಗೆ ದಾಖಲಿಸಲಾಗಿದೆ.