ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 10 ದಿನಗಳ ಅವಧಿಯಲ್ಲಿ ಹೆಚ್ಚುವರಿ 4 ಸಾವಿರ ಮಂದಿಯನ್ನು ದಾಖಲಿಸಿ ಚಿಕಿತ್ಸೆ ನೀಡುವ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 606 ಮಂದಿಯನ್ನು ದಾಖಲಿಸಿ ಚಿಕಿತ್ಸೆ ನೀಡುವ ಸೌಕರ್ಯವಿದೆ. ಮುಂದಿನ 2 ದಿನಗಳ ಅವಧಿಯಲ್ಲಿ ಹೆಚ್ಚುವರಿ ಒಂದು ಸಾವಿರ ಮಂದಿಯನ್ನು ದಾಖಲಿಸಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಚಿಕಿತ್ಸಾ ಕೇಂದ್ರಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ನಡೆಸಲಿದೆ. ಇದಕ್ಕಿರುವ ಕ್ರಮಗಳು ಈಗಾಗಲೇ ಆರಂಭಗೊಂಡಿವೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ಬಗ್ಗೆ ಆತಂಕ ಬೇಡ. ಸರಕಾರಿ ವಲಯದಲ್ಲಿ 9 ವೆಂಟಿಲೇಟರ್, ಖಾಸಗಿ ವಲಯದಲ್ಲಿ 8 ವೆಂಟಿಲೇಟರ್ ಗಳು ಚಟುವಟಿಕೆ ನಡೆಸುತ್ತಿವೆ.
ತುರ್ತು ಸಂದರ್ಭಗಳಲ್ಲಿ ಬಳಸುವ ನಿಟ್ಟಿನಲ್ಲಿ 7 ವೆಂಟಲೇಟರ್ ಗಳನ್ನು ಸರಕಾರಿ ವಲಯದಲ್ಲಿ ಕಾದಿರಿಸಲಾಗಿದೆ. ಅಗತ್ಯ ಬಿದ್ದಲ್ಲಿ ಕಾಞಂಗಾಡು ಜಿಲ್ಲಾ ಆಸ್ಪತ್ರೆ ಮತ್ತು ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ಐಸಿಯು ಸೌಲಭ್ಯ ಸಜ್ಜುಗೊಳಿಸಲಾಗಿದೆ. ರೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಿದರೆ ಕಾಞಂಗಾಡು ಜಿಲ್ಲಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಮಾರ್ಪಡಿಸಲಾಗುವುದು. ಹತ್ತು 108 ಆಂಬ್ಯುಲೆನ್ಸ್ ಗಳು ಜಿಲ್ಲೆಯಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗಾಗಿ ಮಾತ್ರ ಸೇವೆ ಒದಗುಸುತ್ತಿವೆ.
ರೋಗಿಗಳ ಸಂಖ್ಯೆ ಹೆಚ್ಚಿದರೆ ಖಾಸಗಿ ವಲಯದ ಆಂಬ್ಯುಲೆನ್ಸ್ ಗಳನ್ನು ಬಳಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಸೌಲಭ್ಯಗಳಿದ್ದರೂ ವೈದ್ಯರ ಸಮಸ್ಯೆಯಿದೆ
ಜಿಲ್ಲೆಯಲ್ಲಿ ವೈದ್ಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ 5 ಬಾರಿ ಸಂದರ್ಶನ ನಡೆಸಿದ್ದರೂ ಅರ್ಹ ವೈದ್ಯರು ಲಭಿಸದೇ ಇರುವುದು ಪ್ರಧಾನ ಸಮಸ್ಯೆಯಾಗುತ್ತಿದೆ. ಚಿಕಿತ್ಸಾ ಸೌಲಭ್ಯಗಳ ವಿಚಾರದಲ್ಲೂ ಮಿತಿಗಳಿವೆ. ಆದರೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸತತ ಯತ್ನಗಳ ಫಲವಾಗಿ ಅನಿವಾರ್ಯ ಸೌಕರ್ಯಗಳೆಲ್ಲವೂ ಸಜ್ಜುಗೊಳ್ಳುತ್ತಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಈ ಎಲ್ಲಾ ಚಟುವಟಿಕೆಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕಾಗಿದೆ ಎಂದು ಅವರು ವಿನಂತಿಸಿದ್ದಾರೆ.