ಜಿನೀವಾ: ಮಹಾಮಾರಿ ಕೋರೋನಾ ಸೋಂಕು ನಿವಾರಣೆಗೆ ವೈದ್ಯರು ಹೊಸದಾಗಿ ವ್ಯಾಕ್ಸಿನ್ ಕಂಡು ಹಿಡಿಯುವವರೆಗೂ ಗಂಡಾಂತರದ ಬೀಸೋ ದೊಣ್ಣೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ
ಅಮೆರಿಕ ಸೇರಿದಂತೆ ಪ್ರಪಂಚದ ಎಲ್ಲ ಕಡೆ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು , ವೈದ್ಯಲೋಕಕ್ಕೆ ಇದೊಂದು ದೊಡ್ಡ ಸವಾಲಾಗಿದೆ . ಇನ್ನೂ ಯಾವ ದೇಶದ ವಿಜ್ಞಾನಿ, ವೈದ್ಯವೃಂದವೂ ಕೋರೋನಾ ಸೋಂಕಿಗೆ ಖಚಿತ ಲಸಿಕೆ ಕಂಡು ಹಿಡಿದಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಈ ವಿಚಾರದಲ್ಲಿ ಅಸಹಾಯಕವಾಗಿಯೇ ಇದೆ ಎಂದು ಸಂಸ್ಥೆಯ ಪ್ರತಿನಿಧಿ ಹೇಳಿದ್ದಾರೆ.
ಪ್ರಪಂಚದ ಎಲ್ಲ ಕಡೆ ಕೋರೋನಾ ನಿವಾರಣೆಗೆ ಎಲ್ಲ ಬಗೆಯ ಸಂಶೋಧನೆ ಮುಂದುವರಿದಿದ್ದರೂ, ವೈರಾಣು ಪತ್ತೆ ಹಚ್ಚಿ ಅದಕ್ಕೆ ತಕ್ಕಂತ ವ್ಯಾಕ್ಸಿನ್ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ. ಆದರೂ ಕೋರೋನಾ ಸೋಂಕು ತಡೆಗೆ ಅನುಸರಿಸ ಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಗತ್ಯ ಕ್ರಮ ಕೈಗೊಂಡಿದೆ. ಅಮೆರಿಕಾದಿಂದ ಸಂಸ್ಥೆಗೆ ಎಂದಿನಂತೆ ನಿಧಿ ದೊರೆಯಲಿದೆ ಎಂಬ ಆಶಾಭಾವನೆ ಇದೆ. ಒಂದು ವೇಳೆ ಅಮೆರಿಕ ಹಣಕಾಸು ನೆರವು ಸ್ಥಗಿತಗೊಂಡರೆ ಅದೊಂದು ದುರದೃಷ್ಟಕರ ಸಂಗತಿಯಾದೀತು ಎಂದು ಸಂಸ್ಥೆ ವಕ್ತಾರ ಡಾ. ಡೇವಿಡ್ ನಬ್ರೋರೋ ಹೇಳಿದ್ದಾರೆ.