ಕುಂಬಳೆ|ಕೇಂದ್ರದ ಯೋಜನೆ ಜಾರಿಗೊಳಿಸದೆ ರಾಜ್ಯ ಸರಕಾರದಿಂದ ವಂಚನೆ: ಒಬಿಸಿ ಮೋರ್ಚಾ ಆರೋಪ

0
75

ಕುಂಬಳೆ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸದೆ ರಾಜ್ಯದ ಪಿಣರಾಯಿ ವಿಜಯನ್ ಸರಕಾರವು ಜನರನ್ನು ವಂಚಿಸುತ್ತಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ಮಂಜೇಶ್ವರ ಮಂಡಲ ಸಮಿತಿಯ ಸಭೆಯು ಆರೋಪಿಸಿದೆ.
ಇದರಿಂದ ಒಬಿಸಿ ವಿಭಾಗಕ್ಕೊಳಪಟ್ಟ ಫಲಾನುಭವಿಗಳು ವಂಚಿತರಾಗುತ್ತಿದ್ದು , ಇದನ್ನು ಖಂಡಿಸಿ ಮಂಡಲದ ಎಲ್ಲ 8 ಗ್ರಾಮ ಪಂಚಾಯತ್ ಗಳಲ್ಲೂ ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಲಾಗಿದೆ.
ಕುಂಬಳೆಯಲ್ಲಿರುವ ಬಿಜೆಪಿ ಮಂಡಲ ಸಮಿತಿ ಕಾರ್ಯಾಲಯದಲ್ಲಿ ಜರಗಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ ಮಣಿಯಂಪಾರೆ ಪರಿಸರದ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಆಪಾದನೆ ಹೊರಿಸಿ ಕೇಸು ದಾಖಲಿಸುವ ಮೂಲಕ ಪೊಲೀಸರು ಆಡಳಿತ ಎಡರಂಗ ಒಕ್ಕೂಟದ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ವಿರುದ್ಧ ಪೊಲೀಸ್ ಠಾಣೆಗೆ ಪ್ರತಿಭಟನಾ ಮಾರ್ಚ್ ನಡೆಸಲು ನಿರ್ಧರಿಸಲಾಯಿತು.
ಸಭೆಯನ್ನು ಒಬಿಸಿ ಮೋರ್ಚಾದ ಕೇರಳ ರಾಜ್ಯ ಅಧ್ಯಕ್ಷ ಎನ್.ಪಿ.ರಾಧಾಕೃಷ್ಣನ್ ಉದ್ಘಾಟಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಹಾಸ ಪೂಜಾರಿ ಕಡಂಬಾರು ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಶ್ಮಿಲ್ ನಾಥ್, ರಾಜ್ಯ ಕೋಶಾಧಿಕಾರಿ ನವೀನ್ ರಾಜ್, ಜಿಲ್ಲಾಧ್ಯಕ್ಷ ಪ್ರೇಮ್ ರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕೆ.ಐಲ್, ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಮುಂತಾದವರು ಮಾತನಾಡಿದರು. ಒಬಿಸಿ ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ್ ಮಣಿಯಂಪಾರೆ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಸಂಕಪ್ಪ ಸುವರ್ಣ ವಂದಿಸಿದರು.

LEAVE A REPLY

Please enter your comment!
Please enter your name here