ಕಾಸರಗೋಡು: ಕುಂಬಳೆ – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಪೆರುವಾಡಿನಿಂದ ಕರಂದಕ್ಕಾಡು ವರೆಗಿನ ರಸ್ತೆಯು ವಿವಿಧೆಡೆ ಸಂಪೂರ್ಣವಾಗಿ ಹದಗೆಟ್ಟಿದ್ದು , ಹಲವೆಡೆ ಮೃತ್ಯುಕೂಪಗಳು ಸೃಷ್ಟಿಯಾಗಿವೆ. ಈ ಮೂಲಕ ಸಾರಿಗೆ ಸಂಚಾರ ನರಕಮಯವಾಗಿದೆ.
ಧಾರಾಕಾರ ಸುರಿದ ಮಳೆಗೆ ಹೈವೇಯಲ್ಲಿ ನೀರು ನಿಂತಿರುವುದೇ ರಸ್ತೆ ಹದಗೆಡಲು ಮುಖ್ಯ ಕಾರಣವಾಗಿದೆ. ಕಳೆದ ವರ್ಷ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಹೆದ್ದಾರಿಯನ್ನು ಬಳಿಕ ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ, ವಾಹನ ಚಾಲಕರ ಹೋರಾಟದ ಫಲವಾಗಿ ಲಕ್ಷಾಂತರ ರೂಪಾಯಿ ಹಣ ಸುರಿದು ಡಾಮರೀಕರಣ ನಡೆಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಕೆಲವೇ ತಿಂಗಳುಗಳಲ್ಲಿ ಹೈವೇಯಲ್ಲಿ ಸಂಪೂರ್ಣ ಹೊಂಡ ಗುಂಡಿಗಳು ತುಂಬಿಕೊಂಡಿವೆ. ಇದೀಗ ರಸ್ತೆಯ ಡಾಮರು ಎದ್ದುಹೋಗಿ ಅಲ್ಲಲ್ಲಿ ಬೃಹದಾಕಾರದ ಹೊಂಡಗಳು ಹಾಗೂ ಅಗಲವಾದ ಪಳ್ಳಗಳು ತಲೆದೋರಿವೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಬಸ್ ಗಳ ಓಡಾಟ ಕಡಿಮೆಯಾಗಿದೆ. ಇನ್ನು ಮುಂದೆ ಬಸ್ ಗಳ ಸಂಚಾರ ಸಮರ್ಪಕವಾಗಿ ಆರಂಭಗೊಂಡಲ್ಲಿ ಹೆದ್ದಾರಿಯು ಇನ್ನಷ್ಟು ಹದಗೆಡಲಿದೆ. ಇದೀಗ ಹೈವೇಯಲ್ಲಿ ಇತರ ವಾಹನ ಸಂಚಾರಕ್ಕೂ ಸಂಕಷ್ಟ ಎದುರಾಗಿದೆ.
ದಿನನಿತ್ಯ ಸಾವಿರಾರು ಮಂದಿ ಈ ಹೆದ್ದಾರಿ ಮೂಲಕ ಸಂಚರಿಸಬೇಕಾಗಿದೆ. ಆದರೆ ಹೆದ್ದಾರಿಯ ಅವ್ಯವಸ್ಥೆಯಿಂದಾಗಿ ನೂರಾರು ಮಂದಿ ನಿತ್ಯ ಪ್ರಯಾಣಿಕರು ಕುಂಬಳೆ, ಸೀತಾಂಗೋಳಿ, ಉಳಿಯತ್ತಡ್ಕ , ಕರಂದಕ್ಕಾಡು ಮೂಲಕ ಕಾಸರಗೋಡಿಗೆ ಸಂಚರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯು ತಲಪ್ಪಾಡಿಯಿಂದ ಕುಂಬಳೆ ಪೆರುವಾಡು ತನಕ ಸುಗಮವಾಗಿದ್ದರೂ, ಪೆರುವಾಡಿನಿಂದ ಕರಂದಕ್ಕಾಡು ವರೆಗೆ ಹೈವೇಯಲ್ಲಿ ಪ್ರಯಾಣವು ನರಕಯಾತನೆಯಾಗಿ ಪರಿಣಮಿಸಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಭಾಗವು ಇನ್ನಾದರೂ ಕೂಡಲೇ ಗಮನಹರಿಸಿ, ರಸ್ತೆ ದುರಸ್ತಿಗೊಳಿಸಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕಾಗಿದೆ.