ಕುಂಬಳೆ: ಅಜ್ಜಿಕತೆಗಳ ಮೂಲಕ ಅಯೋಧ್ಯೆಯು ರಾಮಜನ್ಮಭೂಮಿ ಎಂಬುದು ಎಲ್ಲರಿಗೂ ಬಾಲ್ಯದಲ್ಲಿಯೇ ತಿಳಿದ ವಿಚಾರವಾಗಿದೆ. ಆದರೆ ಅಲ್ಲಿ ನಮ್ಮ ಆರಾಧ್ಯ ಪುರುಷನಿಗೇ ನೆಲೆ ಇಲ್ಲ. ಆದರೆ ಇಂದು ಕಾಲ ಬದಲಾಗಿದ್ದು, ಜನ್ಮಭೂಮಿಯಲ್ಲಿ ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಕಾರ್ಯಕರ್ತರ ತ್ಯಾಗ, ಹೋರಾಟವನ್ನು ನಾವು ಗೌರವಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ತಾಲೂಕು ಸಂಘಚಾಲಕ ಗುಣಾಜೆ ಶಿವಶಂಕರ ಭಟ್ ಹೇಳಿದರು.
ವಿಶ್ವಹಿಂದೂ ಪರಿಷತ್, ಭಜರಂಗದಳ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಬುಧವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಅಯೋಧ್ಯೆ ಕರಸೇವಕರಿಗೆ ನಡೆದ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗುಂಡಿನೇಟು, ಲಾಠಿ ಏಟು ತಿಂದರೂ ಹೋರಾಟದಿಂದ ಕಾರ್ಯಕರ್ತರು ಹಿಂದೆ ಬಾರದೆ ಅಚಲವಾಗಿ ನಿಂತಿರುವುದರ ಫಲವಾಗಿ ಇಂದು ಭೂಮಿ ಪೂಜೆ ನಡೆಸುವಂತಾಯಿತು. ಹಿರಿಯರ ಹೋರಾಟ ಇಂದಿನ, ಮುಂದಿನ ಜನಾಂಗಕ್ಕೆ ಸ್ಪೂರ್ತಿಯಾಗಿದೆ ಎಂದರು.
ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಶುಭಾಶಂಸನೆಗೈದರು. ಭಜರಂಗದಳ ಬದಿಯಡ್ಕ ಪ್ರಖಂಡ ಸಂಚಾಲಕ ಸುನಿಲ್ ಕಿನ್ನಿಮಾಣಿ ಉಪಸ್ಥಿತರಿದ್ದರು.
ವಿಹಿಂಪ ಬದಿಯಡ್ಕ ಪ್ರಖಂಡ ಪ್ರ.ಕಾರ್ಯದರ್ಶಿ ಹರಿಪ್ರಸಾದ್ ರೈ ಪುತ್ರಕಳ ಸ್ವಾಗತಿಸಿ, ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲ್ಲಾಯ ಬದಿಯಡ್ಕ ವಂದಿಸಿದರು. 30 ಮಂದಿ ಕರಸೇವಕರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ನಿತೀಶ್ ಸಾಗರ್ ಹಾಗೂ ನಿರಂತ್ ಸಾಗರ್ ಮಾನ್ಯ ಶ್ರೀರಾಮ ಹಾಗೂ ಹನುಮಂತನ ವೇಷ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.